RCB vs SRH ಇಂದು ಹೈವೋಲ್ಟೇಜ್ ಪಂದ್ಯ

RCB vs SRH ಇಂದು ಹೈವೋಲ್ಟೇಜ್ ಪಂದ್ಯ

ಬೆಂಗಳೂರು: ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 30ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡವು ತವರು ಮೈದಾನದ ಲಾಭವನ್ನು ಪಡೆದುಕೊಳ್ಳಲು ಹೆಣಗಾಡುತ್ತಿದೆ.  ಈಗಾಗಲೇ ಆಡಿರುವ 6 ಪಂದ್ಯಗಳಲ್ಲಿ ಆರ್​ಸಿಬಿ 5 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಇನ್ನು ಗೆದ್ದಿರುವುದು ಕೇವಲ 1 ಪಂದ್ಯ ಮಾತ್ರ. ಇದೀಗ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಆರ್​ಸಿಬಿಗೆ ಗೆಲುವು ಅನಿವಾರ್ಯ. ಏಕೆಂದರೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದಿನ ಪಂದ್ಯದಲ್ಲಿ ಗೆದ್ದರೆ ಒಂದು ಸ್ಥಾನ ಮೇಲೇರಬಹುದು.

ಆವೃತ್ತಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ತಂಡ ಸೋಲಿನ ವಿಮೋಚನೆ ಮಾಡಬೇಕಿದೆ ಮತ್ತು ಪ್ರವಾಸಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಬಲಿಷ್ಠವಾಗಿರುವುದರಿಂದ ಗೆಲುವು ಕಷ್ಟಸಾಧ್ಯವಾಗಿದೆ. ಈಗಾಗಲೇ ಐಪಿಎಲ್‌ನ ಅತ್ಯಧಿಕ 277 ರನ್‌ಗಳನ್ನು ಬಾರಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಬೆಂಗಳೂರಿನಲ್ಲಿ ಔಟ್‌ ಆಫ್ ಫಾರ್ಮ್ ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಸುಲಭವಾಗಿ ಎದುರಿಸುವ ನಿರೀಕ್ಷೆಯಿದೆ.

ನಾಯಕ ಫಾಫ್ ಡು ಪ್ಲೆಸಿಸ್, ಭಾರತದ ಬ್ಯಾಟರ್ ರಜತ್ ಪಾಟಿದಾರ್ ಫಾರ್ಮ್‌ಗೆ ಮರಳಿದಂತೆ ಕಂಡುಬಂದರು. ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಮಾತ್ರ ತಮ್ಮ ಅದ್ಭುತ ಫಿನಿಶಿಂಗ್ ಆಟವನ್ನು ಮುಂದುವರೆಸಿದ್ದಾರೆ. ಆದರೆ, ಆರ್‌ಸಿಬಿ ತಂಡದ ಬೌಲಿಂಗ್ ದೌರ್ಬಲ್ಯವು ತಲೆಕೆಡಿಸಿಕೊಳ್ಳಬೇಕಾದ ವಿಷಯವಾಗಿದೆ.

ಹೀಗಾಗಿ ಎಸ್​ಆರ್​ಹೆಚ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆರ್​ಸಿಬಿ ಪ್ಲೇಆಫ್ ಹಂತಕ್ಕೇರುವ ಅವಕಾಶವನ್ನು ಹೆಚ್ಚಿಸಿಕೊಳ್ಳಬೇಕಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಪಡೆಯಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಫ್ರೆಶ್ ನ್ಯೂಸ್

Latest Posts

Featured Videos