ಹಾರ್ದಿಕ್ ಕಳಪೆ ನಾಯಕತ್ವ ವಿರುದ್ಧ ಟೀಕೆಗಳ ಮಹಾಪೂರ

ಹಾರ್ದಿಕ್ ಕಳಪೆ ನಾಯಕತ್ವ ವಿರುದ್ಧ ಟೀಕೆಗಳ ಮಹಾಪೂರ

ಬೆಂಗಳೂರು: ಹೈದರಾಬಾದ್​ನಲ್ಲಿ ನಡೆದ IPL 2024ರ 8ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿತ್ತು.ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024 ರಲ್ಲಿ ಸತತ ಎರಡನೇ ಸೋಲನ್ನು ಎದುರಿಸಿದೆ. ಬುಧವಾರ ನಡೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್  31 ರನ್‌ಗಳಿಂದ ಸೋಲಿಸಿತು.

ಈ ಸೋಲಿನ ಬೆನ್ನಲ್ಲೇ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಟೀಕೆಗಳ ಕೇಳಿ ಬರಲಾರಂಭಿಸಿದೆ. ಇದಕ್ಕೆ ಮುಖ್ಯ ಕಾರಣ ಅವರ ನಾಯಕತ್ವದ ಗುಣಗಳು.

ಏಕೆಂದರೆ ಎಸ್​ಆರ್​ಹೆಚ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್​ಗಳು ದುಬಾರಿಯಾಗುತ್ತಿದ್ದರೂ, ಹಾರ್ದಿಕ್ ಜಸ್​ಪ್ರೀತ್ ಬುಮ್ರಾ ಅವರನ್ನು ಬಳಸಿಕೊಳ್ಳದಿರುವುದು ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಸನ್​ರೈಸರ್ಸ್ ಹೈದರಾಬಾದ್ ತಂಡವು 11 ಓವರ್​ಗಳಲ್ಲಿ 160+ ಸ್ಕೋರ್​ಗಳಿಸಿದರೂ ಹಾರ್ದಿಕ್ ಪಾಂಡ್ಯ ಬುಮ್ರಾ ಅವರನ್ನು ಬಳಸಿಕೊಳ್ಳಲೇ ಇಲ್ಲ. ಮೊದಲ ಹನ್ನೊಂದು ಓವರ್​ಗಳಲ್ಲಿ ನೀಡಿದ್ದು ಕೇವಲ 1 ಓವರ್​ ಮಾತ್ರ. ತಂಡದಲ್ಲಿರುವ ಅತ್ಯುತ್ತಮ ಬೌಲರ್ ಯಾವಾಗ ಬೌಲಿಂಗ್ ಮಾಡಬೇಕೆಂದು ತಿಳಿದಿಲ್ಲವೇ?. ಇದು ಅತ್ಯಂತ ಕಳಪೆ ನಾಯಕತ್ವ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಯೂಸುಫ್ ಪಠಾಣ್ ಟೀಕಿಸಿದ್ದಾರೆ.

ಇನ್ನು ಈ ಬಗ್ಗೆ ಎಕ್ಸ್​ ಮಾಡಿರುವ ಆಸ್ಟ್ರೇಲಿಯಾ ಲೆಜೆಂಡ್ ಟಾಮ್ ಮೂಡಿ, ಜಸ್​ಪ್ರೀತ್ ಬುಮ್ರಾ ಎಲ್ಲಿದ್ದಾರೆ? ಇಡೀ ಪಂದ್ಯವೇ ಕೈ ತಪ್ಪಿ ಹೋಗುತ್ತಿದ್ದರೂ ಬೆಸ್ಟ್ ಬೌಲರ್​ಗೆ ನೀಡಿರುವುದು ಒಂದೇ ಓವರ್. ಇದೆಂತಹ ಕ್ಯಾಪ್ಟನ್ಸಿ ಎಂಬಾರ್ಥದಲ್ಲಿ ಪ್ರಶ್ನಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಅತ್ಯಂತ ಅಚ್ಚರಿಯ ನಡೆ ಎಂದು ಇಂಗ್ಲೆಂಡ್​ನ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ. ಅದು ಕೂಡ ಹಾರ್ದಿಕ್ ಪಾಂಡ್ಯ ಅವರ ಕಳಪೆ ನಾಯಕತ್ವವನ್ನು ವೀಕ್ಷಿಸಿದ ಬಳಿಕ ಎಂಬುದು ವಿಶೇಷ.

ಕುತೂಹಲಕಾರಿ ವಿಷಯ ಎಂದರೆ ಹೆನ್ರಿಕ್ ಕ್ಲಾಸೆನ್ ಅವರನ್ನು ಕಟ್ಟಿ ಹಾಕಲು ಹಾರ್ದಿಕ್ ಪಾಂಡ್ಯ ಬುಮ್ರಾಗೆ ಮೊದಲ 10 ಓವರ್​ಗಳಲ್ಲಿ ಕೇವಲ 1 ಓವರ್ ಮಾತ್ರ ನೀಡಿದ್ದರು. ಆದರೆ ಕ್ಲಾಸೆನ್ ಬರುವ ಮುಂಚೆಯೇ ಎಸ್​ಆರ್​ಹೆಚ್ ಬ್ಯಾಟರ್​ಗಳು 10 ಓವರ್​ಗಳಲ್ಲಿ 148 ರನ್ ಬಾರಿಸಿ ಇತಿಹಾಸ ನಿರ್ಮಿಸಿದರು. ಇದಾಗ್ಯೂ ಹಾರ್ದಿಕ್ ಪಾಂಡ್ಯ ಮಾತ್ರ ಎಚ್ಚರಗೊಂಡಿರಲಿಲ್ಲ ಎಂದು ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಕೂಡ ಟೀಕಿಸಿದ್ದಾರೆ.

ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ಅವರ ನಸೀಬು ಸರಿಯಿದ್ದಂತೆ ಕಾಣುತ್ತಿಲ್ಲ. ಒಂದೆಡೆ ರೋಹಿತ್ ಶರ್ಮಾ ಅಭಿಮಾನಿಗಳ ಮೂದಲಿಕೆ, ಮತ್ತೊಂದೆಡೆ ತಲೆಕೆಳಗಾಗುತ್ತಿರುವ ಲೆಕ್ಕಾಚಾರಗಳಿಂದ ಪಾಂಡ್ಯ ಸಂಕಷ್ಟಕ್ಕೆ ಸಿಲುಕಿರುವುದಂತು ಸತ್ಯ.

ಫ್ರೆಶ್ ನ್ಯೂಸ್

Latest Posts

Featured Videos