ಅಯೋರಾತ್ರಿ ರೈತ ಸೇನಾ ಪ್ರತಿಭಟನೆ

ಅಯೋರಾತ್ರಿ ರೈತ ಸೇನಾ ಪ್ರತಿಭಟನೆ

ಧಾರವಾಡ, ಜ. 28: ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೊಷಣೆ ಮಾಡುವಂತೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ  ಅಹೋರಾತ್ರಿ ಪ್ರತಿಭಟನೆ ನಡೆಸಿದರು.

ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಸಾಲ ಮಾಡಿ ಬಿತ್ತನೆ ಮಾಡುವ ಸ್ಥಿತಿ ಎದುರಾಗಿದೆ. ಅತಿವೃಷ್ಟಿ-ಅನಾವೃಷ್ಟಿಗಳಿಗೂ ರೈತರು ಒಳಗಾಗಿದ್ದಾರೆ. ಬಂದ ಅಲ್ಪಸ್ವಲ್ಪ ಬೆಳೆಯನ್ನು ಕಡಿಮೆ ದರದಲ್ಲಿ ದಲ್ಲಾಳಿಗಳಿಗೆ ಮಾರಾಟ ಮಾಡುವಂತಾಗಿದೆ. ಇದೇ ಕಾರಣದಿಂದ ರೈತ ಸಾಲಗಾರನಾಗಿಯೇ ಉಳಿಯುತ್ತಿದ್ದಾನೆ ಎಂದು ದೂರಿದರು.

ರೈತರ ಕಷ್ಟವನ್ನು ಕಂಡೂ ಕಾಣದಂತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಅಧಿಕಾರಿ ವರ್ಗದವರು ದಲ್ಲಾಳಿಗಳ ಜತೆಗೆ ಹೊಂದಾಣಿಕೆಯಾದಂತಿದೆ. ಹೀಗಾಗಿ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದಂತಾಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಸದ್ಯ ಕೇಂದ್ರ ಸರ್ಕಾರ ಘೊಷಣೆ ಮಾಡಿದ ಬೆಂಬಲ ಬೆಲೆ ಯೋಗ್ಯವಾಗಿಲ್ಲ. ರಾಜ್ಯ ಸರ್ಕಾರ ತಕ್ಷಣವೇ ಕೇಂದ್ರ ಬಿಡುಗಡೆ ಮಾಡಿದ ಬೆಂಬಲ ಬೆಳೆಗಳಿಗೆ ಹೆಚ್ಚುವರಿಯಾಗಿ ಹಣ ನೀಡಿ ಬೆಳೆಗಳನ್ನು ಖರೀದಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಹೆಸರು ಬೆಳೆಗೆ 9975 ರೂ., ಹತ್ತಿಗೆ 7,450, ಉದ್ದು 8,600 ರೂ., ಗೋವಿನ ಜೋಳಕ್ಕೆ 2,700 ರೂ., ಗೋಧಿಗೆ 2,800 ಹಾಗೂ ಕಡಲೆ ಬೆಳೆಗೆ 7,620 ರೂ. ಘೊಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಇದಲ್ಲದೆ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಳೆ ಖರೀದಿಗೆ ಪ್ರಮಾಣ ನಿಗದಿ ಮಾಡದೆ ರೈತರು ಬೆಳೆದ ಸಂಪೂರ್ಣ ಬೆಳೆಗಳನ್ನು ಖರೀದಿಸಬೇಕು. ಈ ಎಲ್ಲ ಬೇಡಿಕೆಗಳನ್ನು 8 ದಿನಗಳಲ್ಲಿ ಸರ್ಕಾರ ಈಡೇರಿಸಬೇಕು. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು. ವೀರೇಶ ಸೊಬರದಮಠ, ಗಂಗಾಧರ ಪಾಟೀಲಕುಲಕರ್ಣಿ, ವರುಣಗೌಡ ಪಾಟೀಲ, ಪ್ರಶಾಂತ ದುಂಡಿಗೌಡ್ರ, ಚಂದ್ರಶೇಖರ ಹರವಿ, ರೈತರು, ಇತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos