ನಿತ್ಯ ನರಕಯಾತನೆ ರಸ್ತೆ ಗುಂಡಿಗಳಿಗಿಲ್ಲ ಮುಕ್ತಿ

ನಿತ್ಯ ನರಕಯಾತನೆ ರಸ್ತೆ ಗುಂಡಿಗಳಿಗಿಲ್ಲ ಮುಕ್ತಿ

ಬೆಂಗಳೂರು, ನ. 15: ನಗರದಲ್ಲಿ  ವಾಹನ ಸವಾರರಿಗೆ ನಿತ್ಯ ನರಕ ತೋರಿಸುತ್ತಿರುವ ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಹರಸಾಹಸ ಪಡುತ್ತಿದೆ. ನಾನೊಂದು ಕಡೆ ನೀನೊಂದು ಕಡೆ ಎಂದು ಜಲಮಂಡಳಿ, ಬೆಸ್ಕಾಂ ರಸ್ತೆ ಅಗೆಯುತ್ತಿವೆ. ಇದರಿಂದ ಗುಂಡಿ ಮುಚ್ಚುವುದೇ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾನೂನಿನ ಪ್ರಕಾರ ಬೆಸ್ಕಾಂ, ಅಥವಾ ಜಲಮಂಡಳಿ ಯಾರೇ ರಸ್ತೆ ಅಗೆದರೂ ಅವರೇ ರಸ್ತೆ ನಿರ್ಮಾಣ ಮಾಡಬೇಕೆನ್ನುವ ನಿಯಮವಿದೆ. ಆದರೆ ಯಾವ ಇಲಾಖೆಯೂ ಆ ಕೆಲಸ ಮಾತ್ರ ಮಾಡುತ್ತಿಲ್ಲ.

ಹಾರಿಕೆ ಉತ್ತರ

ಬಿಬಿಎಂಪಿ ಗುಂಡಿಗಳನ್ನು ಮುಚ್ಚಿ ರಸ್ತೆಯ ನಿರ್ಮಾಣ ಮಾಡಿ ಹೋದರೆ ಮರುದಿನ ಬೆಳಗ್ಗೆ ಜಲಮಂಡಳಿ ಪೈಪ್ ಅಳವಡಿಕೆಗಾಗಿ ಕಿಲೋಮೀಟರ್‌ಗಟ್ಟಲೆ ರಸ್ತೆಯನ್ನು ಅಗೆದು, ಪೈಪ್ ಹಾಕಿ ಹಾಗೆಯೇ ಗುಂಡಿ ಮುಚ್ಚಿ ಹೋಗುತ್ತಾರೆ. ರಸ್ತೆ ಬಗ್ಗೆ ಕೇಳಿದರೆ ಅದು ನಮಗೆ ಗೊತ್ತಿಲ್ಲ ಬಿಬಿಎಂಪಿಯನ್ನು ಕೇಳಿ ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ. ಜಲಮಂಡಳಿ ಸಾಕಷ್ಟು ಕಡೆ ನೀರಿನ ಪೈಪ್ ಅಳವಡಿಕೆಗಾಗಿ ರಸ್ತೆ ಅಗೆದ ಬಳಿಕ ಬೆಸ್ಕಾಂ ಗುಂಡಿ ತೋಡಲು ಸಿದ್ಧವಾಗಿದೆ. ನೆಲದೊಳಗೆ ಕೇಬಲ್ ಅಳವಡಿಸುವ ಕಾಮಗಾರಿ ಇರುವ ಕಾರಣ ಒಂದೆರೆಡು ದಿನಗಳಲ್ಲಿ ಜಯನಗರದಿಂದ ಕಾಮಗಾರಿ ಆರಂಭವಾಗಲಿವೆ. ನಗರದಲ್ಲಿ ಇನ್ನೂ 9೦೦ಕ್ಕಿಂತಲೂ ಹೆಚ್ಚು ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ.

ಹೈಕೋರ್ಟ್ ಆದೇಶ

ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿದ ಮೇಲೆ ಇಲ್ಲಿಯವರೆಗೂ ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ಪಾಲಿಕೆ ಬಳಿಯೇ ಇಲ್ಲವಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಕಾಣಿಸಿದ್ದು, ವಾಹನ ಸವಾರರು ಮತ್ತೆ ತೊಂದರೆ ಎದುರಿಸುವಂತಾಗಿದೆ. ಬಿಬಿಎಂಪಿ ತರಾತುರಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಭರದಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ ಎಂಬ ಆರೋಪವೂ ಕೇಳಿದೆ. ಬಿಬಿಎಂಪಿ ವ್ಯಾಪ್ತಿಯ 401 ಕಿ.ಮೀ. ಉದ್ದದ ರಸ್ತೆಯಲ್ಲಿ ಗುಂಡಿಗಳಿವೆ ಎಂದು ಇತ್ತೀಚೆಗೆ ಹೈಕೋರ್ಟ್ಗೆ ಬಿಬಿಎಂಪಿ ಮಾಹಿತಿ ನೀಡಿತ್ತು. ಬಿಬಿಎಂಪಿ ಈವರೆಗೂ ಎಷ್ಟು ಗುಂಡಿ ಮುಚ್ಚಲಾಗಿದೆ ಎಂಬ ಅಂಕಿ- ಅಂಶಗಳನ್ನು ಬಹಿರಂಗಗೊಳಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕಳಪೆ ಕಾಮಗಾರಿ ಆರೋಪ

ನಗರದ ರಸ್ತೆಗಳಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳುತ್ತಿರುವ ಬಿಬಿಎಂಪಿ ವಿರುದ್ಧ ಕಳಪೆ ಕಾಮಗಾರಿಯ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂಧ ರಸ್ತೆ ಗುಂಡಿಗಳು ಹೆಚ್ಚಿವೆ ಎಂಬ ದೂರುಗಳು ಬಂದಿವೆ. ಅಲ್ಲದೆ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಿದ ಬಳಿಕ, ಕಾಮಗಾರಿ ಗುಣಮಟ್ಟದ್ದಾಗಿದೆಯೇ ಎಂದು ಪರಿಶೀಲನೆ ಕೂಡ ನಡೆಸುತ್ತಿಲ್ಲ. ಹೀಗಾಗಿ ರಸ್ತೆಗುಂಡಿಗಳು ಮತ್ತೆ ಯಥಾಸ್ಥಿತಿಗೆ ತಲುಪಿವೆ. ಇದರಿಂದಾಗಿ ಸಾರ್ವಜನಿಕರು ಧೂಳು, ಗುಂಡಿಗಳಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ನಾಮಕಾವಸ್ತೆ ಆ್ಯಪ್

ಬಿಬಿಎಂಪಿಯ ಅಧಿಕೃತ ವೆಬ್ ಸೈಟ್ ಪ್ರಕಾರ ಮಹದೇವಪುರ ಹಾಗೂ ಯಲಹಂಕ ವಲಯದಲ್ಲಿ ಒಂದೇ ಒಂದು ರಸ್ತೆಗುಂಡಿ ಇಲ್ಲ ಎಂದು ಪ್ರಕಟಿಸಲಾಗಿದೆ. ಆದರೆ, ವೆಬ್ ಸೈಟ್‌ನಲ್ಲಿರುವುದು ಕಳೆದ ವರ್ಷದ ರಸ್ತೆಗುಂಡಿಗಳ ವಿವರ. ದಕ್ಷಿಣ ವಲಯದಲ್ಲಿ ನವೆಂಬರ್ 2, ದಾಸರಹಳ್ಳಿ ಹಾಗೂ ಆರ್‌ಆರ್ ನಗರದಲ್ಲಿ ಅಕ್ಟೋಬರ್ 26, ಬೊಮ್ಮನಹಳ್ಳಿಯಲ್ಲಿ ನವೆಂಬರ್ 2ರ ವರೆಗಿನ ರಸ್ತೆಗುಂಡಿಗಳ ವಿವರ ಮಾತ್ರ ಇದೆ. ಯಲಹಂಕ ಮತ್ತು ಮಹದೇವಪುರದಲ್ಲಿ ರಸ್ತೆಗುಂಡಿಗಳೇ ಇಲ್ಲ ಎಂದು ಕ್ಲೀನ್ ಚೀಟ್ ನೀಡಿದೆ. ಬಿಬಿಎಂಪಿಯ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಕೇವಲ ದೂರು ದಾಖಲಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ. ದೂರು ದಾಖಲಿಸಿದರೂ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ವೆಬ್ ಸೈಟ್ ಮಾಹಿತಿ ಹಳೆಯದು

ರಸ್ತೆ ಗುಂಡಿಗಳನ್ನು ಮುಚ್ಚಿರುವುದರ ಕುರಿತು ಅಧಿಕಾರಿಗಳನ್ನು ವಿಚಾರಿಸಿದರೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಮಾಹಿತಿಯಿದೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ. ಆದರೆ ವೆಬ್ ಸೈಟ್‌ನಲ್ಲಿ ಹಳೆಯ ಅಂಕಿ ಅಂಶ ಹಾಕಿದ್ದು, ಇದೇ ವರ್ಷದ ಮಾಹಿತಿ ಎಂದು ಬಿಂಬಿಸಿದೆ. ಜತೆಗೆ ಕೆಲವು ವಲಯಗಳ ರಸ್ತೆಗಳಲ್ಲಿ ಗುಂಡಿಗಳೇ ಇಲ್ಲ ಎಂದು ಮಾಹಿತಿಯಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos