ಭ್ರಷ್ಟಾಚಾರದ ಶ್ವೇತಪತ್ರಕ್ಕೆ ಶಾಸಕ ಆಗ್ರಹ

  • In State
  • August 4, 2020
  • 159 Views
ಭ್ರಷ್ಟಾಚಾರದ ಶ್ವೇತಪತ್ರಕ್ಕೆ ಶಾಸಕ ಆಗ್ರಹ

ತುಮಕೂರು:ಕೊರೋನಾ ಸೋಂಕು ತಡೆಗೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ೪,೨೦೦ ಕೋಟಿ ರೂ. ಭ್ರಷ್ಟಾಚಾರ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ  ಶ್ವೇತಪತ್ರ ಹೊರಡಿಸಬೇಕು. ಹಾಗೂ ಉಚ್ಛ ನ್ಯಾಯಾಲಯದ ನ್ಯಾಯಾಧೀಶರೊಬ್ಬರಿಂದ ಸಮಗ್ರ ತನಿಖೆ ನಡೆಸಬೇಕೆಂದು ಗೌರಿಬಿದನೂರು ಶಾಸಕ ಎನ್.ಹೆಚ್. ಶಿವಶಂಕರರೆಡ್ಡಿ ಒತ್ತಾಯಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕು ಕಾಣಿಸಿಕೊಂಡು ನಾಲ್ಕೈದು ತಿಂಗಳಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೆ ವೈಜ್ಞಾನಿಕ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಚಪ್ಪಾಳೆ ತಟ್ಟಿಸುವುದು, ಜಾಗಟೆ ಬಾರಿಸುವುದು, ದೀಪ ಹಚ್ಚುವ ಭಾವನಾತ್ಮಕ ಹೇಳಿಕೆಗಳನ್ನು ನೀಡಿ, ಸೋಂಕು ಹೆಚ್ಚಳಕ್ಕೆ ಕಾರಣವಾಗಿದ್ದು, ಕೊರೋನ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.

ಭ್ರಷ್ಟಾಚಾರ:ಕೇಂದ್ರ ಸರ್ಕಾರದ ಪಿಎಂ ಕೇರ್ ಯೋಜನೆಯಡಿ ೪ ಲಕ್ಷ ರೂ.ನಂತೆ ಒಟ್ಟು ೫೦ ಸಾವಿರ ವೆಂಟಿಲೇಟರ್ ಖರೀದಿಸಿದ್ದು, ತಮಿಳುನಾಡು ರಾಜ್ಯ ಸರ್ಕಾರ ಪ್ರತಿ ವೆಂಟಿಲೇಟರ್‌ಗೆ ೪.೭೮ ಲಕ್ಷ ರೂ.ಗೆ ಖರೀದಿಸಿದ್ದರೆ ಕರ್ನಾಟಕ ಸರ್ಕಾರ ಪ್ರತಿ ವೆಂಟಿಲೇಟರ್‌ಗೆ ೫.೬೦ ಲಕ್ಷದಿಂದ ೧೮.೨೦ ಲಕ್ಷ ರೂ.ಗೆ ಖರೀದಿ ಮಾಡಿದೆ. ರಾಜ್ಯ ಸರ್ಕಾರ ೯.೬೫ ಲಕ್ಷ ಪಿಪಿಇ ಕಿಟ್ಟುಗಳನ್ನು ಖರೀದಿಸಿದ್ದು, ಇದಕ್ಕೆ ಮಾರುಕಟ್ಟೆ ಬೆಲೆ ಪ್ರತಿ ಕಿಟ್‌ಗೆ ೩೦೦ ರೂ.ನಿಂದ ೫೦೦ ರೂ, ಇದೆ. ಕರ್ನಾಟಕ ಸರ್ಕಾರ ೩೩೦ ರೂ.ನಿಂದ ೨೧೧೭ ರೂ.ಗೆ ಖರೀದಿಸಿದ್ದು, ಮಾಸ್ಕ್ಗಳಿಗೆ ಮಾರುಕಟ್ಟೆ ಬೆಲೆ ೫೦ ರಿಂದ ೬೦ ರೂ., ಕರ್ನಾಟಕ ಸರ್ಕಾರ ಪ್ರತಿ ಮಾಸ್‌ಗೆ ೧೨೬ ರೂ.ನಿಂದ ೧೫೦ ರೂ.ಗೆ ಖರೀದಿಸಿದೆ ಎಂದು ಅಂಕಿ ಅಂಶ ನೀಡಿದರು.

ಉತ್ತಮ ಗುಣಮಟ್ಟದ ಥರ್ಮಲ್ ಸ್ಕ್ಯಾನರ್ ನ ಮಾರುಕಟ್ಟೆ ಬೆಲೆ ಗರಿಷ್ಠ ೩ ಸಾವಿರ ರೂ., ಕರ್ನಾಟಕ ಸರ್ಕಾರ ೫,೪೯೫ ರೂ.ಗೆ ಖರೀದಿಸಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ೯ ಸಾವಿರ ರೂ.ಗೆ ಖರೀದಿಸಲಾಗಿದೆ. ಸ್ಯಾನಿಟೈಸರ್ ಉತ್ತಮ ಗುಣಮಟ್ಟದ ೫೦೦ ಮಿಲಿಗೆ ಮಾರುಕಟ್ಟೆ ಬೆಲೆ ೧೦೦ ರೂ. ಇದ್ದರೆ ಕರ್ನಾಟಕ ಸರ್ಕಾರ ೨೫೦ ರೂ.ಗೆ ಸಮಾಜ ಕಲ್ಯಾಣ ಇಲಾಖೆಯಿಂದ ೬೦೦ ರೂ.ಗೆ ಖರೀದಿಸಿದೆ. ಆಮ್ಲಜನಕ ಸಾಧನಗಳು (ಹೆಚ್‌ಎಫ್‌ಎನ್‌ಸಿ ಥೆರಫಿ ಸಾಧನ), ಕೇರಳ ಸರ್ಕಾರ ೨.೮೭ ಲಕ್ಷ ರೂ.ಗೆ ಖರೀದಿಸಿದ್ದರೆ ಕರ್ನಾಟಕ ಸರ್ಕಾರ ೪.೩೭ ಲಕ್ಷ ರೂ.ಗೆ ಖರೀದಿಸಿದೆ. ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಬೇರೆ ರಾಜ್ಯಗಳಿಗಿಂತ ಕರ್ನಾಟಕ ಸರ್ಕಾರ ೨ ರಿಂದ ೩ ಪಟ್ಟು ಹೆಚ್ಚು ಹಣ ಕೊಟ್ಟು ಖರೀದಿಸಿರುವುದು ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಕಂಡು ಬರುತ್ತದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos