ಇಂದಿನಿಂದ 2024ನೇ ಸಾಲಿನ ಸಿಇಟಿ ಪರೀಕ್ಷೆ ಆರಂಭ

ಇಂದಿನಿಂದ 2024ನೇ ಸಾಲಿನ ಸಿಇಟಿ ಪರೀಕ್ಷೆ ಆರಂಭ

ಬೆಂಗಳೂರು: ಇಂದಿನಿಂದ 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಇಂದು ರಾಜ್ಯಾದ್ಯಂತ ಆರಂಭವಾಯಿತು. ಭಾರೀ ಬಿಗಿಭದ್ರತೆ ಹಾಗೂ ಕಟ್ಟುನಿಟ್ಟಿನ ಕ್ರಮಗೊಳಿಂದಿಗೆ ಕರ್ನಾಟಕ ಪರೀಕ್ಷಾ ಪ್ರಾಕಾರ ಪರೀಕ್ಷೆ ನಡೆಸುತ್ತಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳು ತಲುಪಿದ್ದು, ಸುಸೂತ್ರವಾಗಿ ಪರೀಕ್ಷೆ ಆರಂಭವಾಗಿದೆ.

ಈ ತನಕ ಯಾವುದೇ ಗೊಂದಲ ಉಂಟಾಗಿಲ್ಲ ಎಂದು ಕೆಇಎ ಮೂಲಗಳು ತಿಳಿಸಿವೆ. ಕೊನೆಗಳಿಗೆವರೆಗೂ ಕೆಲವೊಂದು ವಿದ್ಯಾರ್ಥಿಗಳು ಪ್ರವೇಶಪತ್ರ ಡೌನ್‍ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದರು ಎಂದು ಮೂಲಗಳು ಹೇಳಿವೆ.ಇಂದು ಬೆಳಿಗ್ಗೆ 10.30ರಿಂದ 11.50 ಗಂಟೆವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50ರವರೆಗೆ ಗಣಿತ ಪರೀಕ್ಷೆಗಳು ನಡೆದಿವೆ.

ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.ಕರ್ನಾಟಕ ಪರೀಕ್ಷಾ ಪ್ರಾಕಾರದ ಮಾಹಿತಿ ಪ್ರಕಾರ, 3,81,887 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸ್‍ಗಳಿಗೆ ಸೇರ ಬಯಸುವವರು ಸೇರಿದ್ದಾರೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕೆಲವು ಷರತ್ತು ಹಾಗೂ ಸೂಚನೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪತ್ರದೊಂದಿಗೆ ನೀಡಿದೆ. ಸಿಇಟಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಡ್ರೈವಿಂಗ್ ಲೈಸೆನ್ಸ್, ಪಾಸ್‍ ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ದ್ವಿತೀಯ ಪಿಯುಸಿ ಪ್ರವೇಶ ಪತ್ರ ಯಾವುದಾದರೂ ತೆಗೆದುಕೊಂಡು ಹೋಗಬೇಕು. ಪರೀಕ್ಷೆಗೆ ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ನು ಮಾತ್ರ ಬಳಸಬೇಕು ಎಂದು ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos