ಬಿಎಸ್ ಸ್ಮರಣೆ: ಘೋಷಣೆಯಾಗದ ಅಭ್ಯರ್ಥಿ

ಬಿಎಸ್ ಸ್ಮರಣೆ: ಘೋಷಣೆಯಾಗದ ಅಭ್ಯರ್ಥಿ

ಶಿರಾ: ಉಪ ಚುನಾವಣೆಗೆ ಅಭ್ಯರ್ಥಿಯ ಘೋಷಣೆ ನಿರೀಕ್ಷಿಸುತ್ತಿದ್ದ ಪಕ್ಷದ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ.
ಹಾಲಿ ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಕ್ಷೇತ್ರಕ್ಕೆ ಮಂಗಳವಾರವೇ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಇತ್ಯರ್ಥಗೊಂಡಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಜನರಲ್ಲಿ ಕುತೂಹಲ ಗರಿಗೆದರಿತ್ತು.
ಇದೇ ನಿರೀಕ್ಷೆಯಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಅಹವಾಲು ಮಂಡಿಸುವ ಮೂಲಕ ಅಭ್ಯರ್ಥಿಯ ಘೋಷಣೆ ನಿರೀಕ್ಷಿಸಿ ಬಂದಿದ್ದ ಹಲವಾರು ಕಾರ್ಯಕರ್ತರಿಗೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನೂ ಎರಡು ದಿನಗಳ ಕಾಲಾವಧಿಯಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದ್ದು, ನಿರಾಸೆ ಉಂಟು ಮಾಡಿದರೆ, ಆಕಾಂಕ್ಷಿಗಳಲ್ಲಿ ತಳಮಳ ಉಂಟು ಮಾಡಿದ್ದರೆ ಆಶ್ಚರ್ಯವಿಲ್ಲ.
ಬಹುತೇಕ ಎಲ್ಲ ಮುಖಂಡರೂ ಕಳೆದ ಕುಮಾರಸ್ವಾಮಿ ಸರ್ಕಾರದ ಸಾಧನೆ ಮತ್ತು ಬಿಎಸ್ ಹೆಸರಿನಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ, ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದರು.
ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ೨೦೧೮ರಲ್ಲಿ ಪಕ್ಷ ಹೀನಾಯವಾಗಿ ಸೋತಾಗ, ರಾಜಕೀಯ ನಿವೃತ್ತಿ ಪಡೆಯಲು ಬಯಸಿದ್ದೆ. ಆದರೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯಾಗುವಂತೆ ಆಹ್ವಾನ ನೀಡಿದಾಗ, ಈ ನಾಡಿನ ರೈತರ ಋಣ ತೀರಿಸಲು ಸಿಕ್ಕ ಅವಕಾಶ ಎಂದು ಒಲ್ಲದ ಮನಸ್ಸಿನಿಂದ ಮುಖ್ಯಮಂತ್ರಿಯಾದೆ. ಅನೇಕ ವ್ಯಂಗ್ಯಗಳು ಮತ್ತು ದುರ್ಬಲ ಹಣಕಾಸು ಸ್ಥಿತಿಯ ಮಧ್ಯೆಯೂ ರೈತರ ಸಾಲ ಮನ್ನಾ ಮಾಡಿದೆ, ದರಿದ್ರ ಸರ್ಕಾರ ಬಂದಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ಹರಿಹಾಯ್ದರು.

ದಿವಂಗತ ಶಾಸಕರ ಪುತ್ರ ಸತ್ಯಪ್ರಕಾಶ್ ಮಾತನಾಡಿ, ಪಕ್ಷ ಯಾರಿಗೇ ಟಿಕೆಟ್ ಕೊಡಲಿ, ನಮ್ಮ ತಂದೆಯ ಆಣೆಯಾಗಿ ನಾನು ಅವರ ಪರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಮ್ಮ ಗುರಿ ಗೆಲುವಿನ ಬಾವುಟವನ್ನು ಕುಮಾರಣ್ಣನ ಕೈಗೆ ಕೊಡುವುದೇ ಆಗಿದೆ ಎಂದು ಘೋಷಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos