ಬೆಂಗಳೂರು, ಡಿ. 14: ಹೆಬ್ಬಾಳದಲ್ಲಿ ಎರಡು ಬೇರೆ ಮೆಟ್ರೊ ನಿಲ್ದಾಣಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ನಿರ್ಮಾಣ ಮಾಡಲಿದೆ.
ಹೆಬ್ಬಾಳದಿಂದ ದಕ್ಷಿಣ ಬೆಂಗಳೂರು ಕಡೆಗೆ ಹೋಗುವವರಿಗೆ ಒಂದು ನಿಲ್ದಾಣ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಹೋಗುವವರಿಗೆ ಮತ್ತೊಂದು ನಿಲ್ದಾಣ ನಿರ್ಮಾಣಗೊಳ್ಳಲಿದೆ.
‘ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಭವಿಷ್ಯದಲ್ಲಿ ಈ ಮಾರ್ಗದಲ್ಲಿ ಹೆಚ್ಚು ರೈಲುಗಳು ಸಂಚರಿಸುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆಂಟ್ರಲ್ ಸಿಲ್ಕ್ಬೋರ್ಡ್–ಕೆ.ಆರ್. ಪುರದ ಹೊರವರ್ತುಲ ರಸ್ತೆ ಮಾರ್ಗದ ನಿಲ್ದಾಣಕ್ಕೆ ಹೆಬ್ಬಾಳ ಉತ್ತರ ಹಾಗೂ ಜೆ.ಪಿ. ನಗರದಿಂದ ಹೆಬ್ಬಾಳ ಸಂಪರ್ಕಿಸುವ ಮಾರ್ಗದ ನಿಲ್ದಾಣಕ್ಕೆ ಹೆಬ್ಬಾಳ ಪಶ್ಚಿಮ ಎಂದು ಹೆಸರಿಡುವ ಯೋಚನೆ ಇದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ತಿಳಿಸಿದರು.