ಪೊಲೀಸರ ಅಪ್ರಮಾಣಿಕತೆ ಸಹಿಸಲ್ಲ: ಜ್ಞಾನೇಂದ್ರ

ಪೊಲೀಸರ ಅಪ್ರಮಾಣಿಕತೆ ಸಹಿಸಲ್ಲ: ಜ್ಞಾನೇಂದ್ರ

ಬೆಂಗಳೂರು :  ಪೊಲೀಸ್ ಇಲಾಖೆಗೆ ಅವಮಾನ ತರುವ ಕೆಲಸವನ್ನು ಯಾರೇ ಮಾಡಿದರೂ ಸಹಿಸುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಸಿದರು.ನಗರ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ವಸ್ತುಗಳ ಪ್ರದರ್ಶನ ಹಾಗೂ ವಾರಸುದಾರರಿಗೆ ಮರಳಿ ನೀಡಲು ಬುಧವಾರ ಸಿಎಆರ್ ಕೇಂದ್ರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೌಡಿಗಳು ಸೇರಿದಂತೆ ಅಪರಾಧ ಜಗತ್ತಿನೊಂದಿಗೆ ಕೈ ಜೋಡಿಸುವವರನ್ನು ಸಹಿಸುವುದಿಲ್ಲ. ಅಂತಹವರ ಬಗ್ಗೆ ವರದಿ ಪಡೆದು ಎಲ್ಲಿಡಬೇಕೋ ಅಲ್ಲಿಡುತ್ತೇವೆ. ಎಲ್ಲರೂ ಅಪ್ರಮಾಣಿಕರಲ್ಲ. ಕೆಲವರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದರು. ಪೊಲೀಸರು ಅಪರಾಧ ಜಗತ್ತನ್ನು ಮೆಟ್ಟಿ ನಿಲ್ಲುವ ಅಥವಾ ತುಳಿಯುವ ಕೆಲಸ ಮಾಡಬೇಕೇ ಹೊರತು ಅಪರಾಧಿಗಳೊಂದಿಗೆ ಶಾಮೀಲಾಗಬಾರದು. ಪ್ರಮಾಣಿಕವಾಗಿ ಕೆಲಸ ಮಾಡಿದವರಿಗೆ ಸರ್ಕಾರ ಬೆನ್ನು ತಟ್ಟುವ ಕೆಲಸ ಮಾಡಲಿದೆ. ಕೆಲವರು ಕೊಲೆ ಕೇಸಿನಲ್ಲಿ ಭಾಗಿಯಾಗಿರುವ ಮಾತುಗಳು ಕೇಳಿ ಬಂದಿವೆ. ಪೊಲೀಸರ ಬಗ್ಗೆ ಅಲ್ಲಿ ಇಲ್ಲಿ ಅಪಸ್ವರೂಪಗಳು ಕೇಳಿ ಬರುತ್ತಿವೆ. ಪೊಲೀಸರ ಅಪ್ರಮಾಣಿಕತೆ ಸಹಿಸಲಾಗದು. ಇದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಸಾರ್ವಜನಿಕರ ಪ್ರಾಣ, ಮಾನ, ಸ್ವತ್ತು ರಕ್ಷಣೆ ಮಾಡುವಲ್ಲಿ ಹಗಲಿರುಳು ಸೇವೆ ಸಲ್ಲಿಸುವ ಪೊಲೀಸರ ಬಗ್ಗೆ ಮೆಚ್ಚುಗೆ ಇದೆ. ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು 24 ಗಂಟೆಯಲ್ಲೇ ಭೇದಿಸಿ ನೆಮ್ಮದಿ ನೀಡಿದ್ದಾರೆ. ಒಂದೇ ಬಾರಿಗೆ ಅಪರಾಧ ನಿಲ್ಲಿಸಲು ಆಗುವುದಿಲ್ಲ. ಇಲ್ಲಿ ಪ್ರದರ್ಶನಕ್ಕಿಟ್ಟಿರುವ ಕೋಟ್ಯಂತರ ರೂ. ಬೆಲೆ ಬಾಳುವ ಸ್ವತ್ತುಗಳನ್ನು ನೋಡಿದರೆ ಪೊಲೀಸರ ಬಗ್ಗೆ ಅಪಸ್ವರದ ಮಾತುಗಳನ್ನು ಆಡುವವರ ಮನಸ್ಸೂ ಕೂಡ ಬದಲಾವಣೆಯಾಗುತ್ತದೆ. ಅವರು ಹೇಗೆ ಅರ್ಪಣಾ ಭಾವದಿಂದ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಅಪರಾಧಿಗಳು ಆಧುನಿಕ ಸೌಲಭ್ಯ ಬಳಸಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ಪೊಲೀಸರು ಅವರಿಗಿಂತ ಮುಂದೆ ಹೋಗಿ ಅದನ್ನು ತಡೆಯುವ ಕೆಲಸ ಮಾಡಬೇಕು. ಅಂತರ್ರಾಜ್ಯ ಪೊಲೀಸರಿಗೆ ಸೈಬರ್ ತರಬೇತಿ ನೀಡುತ್ತಿರುವುದು ಹೆಮ್ಮೆಯ ವಿಷಯ. ಅಂಬರ್ಗ್ರೀಸ್ ಒಂದು ಕೆಜಿಗೆ ಒಂದು ಕೋಟಿ ರೂ. ಮೌಲ್ಯವಿದೆ ಎಂದು ಹೇಳಲಾಗುತ್ತಿದೆ. ಪ್ರಕೃತ್ತಿ ದತ್ತವಾಗಿ ಸಿಗುವ ಅಮೂಲ್ಯ ವಸ್ತುವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳುವ ಮೂಲಕ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos