ಕಲ್ಪತರು ನಾಡಿಗೆ ತಾಯಿ ಮಕ್ಕಳ ಆಸ್ಪತ್ರೆ ಭಾಗ್ಯ

  • In State
  • May 18, 2020
  • 207 Views
ಕಲ್ಪತರು ನಾಡಿಗೆ ತಾಯಿ ಮಕ್ಕಳ ಆಸ್ಪತ್ರೆ ಭಾಗ್ಯ

ತುಮಕೂರು; ಮೇ,18: ಜಿಲ್ಲೆಯ ಸಿರಾ, ತಿಪಟೂರು ಹಾಗೂ ಪಾವಗಡದಲ್ಲಿ ತಾಯಿ, ಮಗುವಿನ ಆಸ್ಪತ್ರೆ ಆಗುತ್ತಿದ್ದು, ಸಿರಾ ಮತ್ತು ತಿಪಟೂರಿನಲ್ಲಿ ಈಗಾಗಲೇ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿವೆ. ಪಾವಗಡದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ತುಮಕೂರು ನಗರಕ್ಕೆ ಪ್ರಸ್ತುತ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಬೇಕಿದ್ದು, ನಗರದ ಜಿಲ್ಲಾಸ್ಪತ್ರೆ ಆವರಣದಲ್ಲೇ ಹೊಸ ತಾಯಿ, ಮಗು ಆಸ್ಪತ್ರೆ ನಿರ್ಮಾಣವಾಗಲಿರುವುದು ನಗರಿಗರಿಗೆ ಇದೊಂದು ರೀತಿಯಲ್ಲಿ ವರದಾನವೇ ಸರಿ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಈ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ಕೇಂದ್ರ ಸರಕಾರ ಮಂಜೂರು ಮಾಡಿದೆ. ಅಂದಾಜು ೨೦ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ೧೦೦ ಹಾಸಿಗೆಗಳ ಸೌಲಭ್ಯವಿರುತ್ತದೆ. ಇದರಲ್ಲಿ ಮುಖ್ಯವಾಗಿ ಹೆರಿಗೆ, ಸಿಸೇರಿಯನ್ ವಿಭಾಗ, ಅದಕ್ಕೆ ಅನುಕೂಲವಾಗುವಂತಹ ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿ ಹಾಗೂ ನವಜಾತ ಶಿಶುಗಳ ಆರೈಕೆಗೆ ಎಲ್ಲಾ ರೀತಿಯ ವ್ಯವಸ್ಥೆಗಳು ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಲಭ್ಯವಾಗಲಿದೆ.

ಅಕ್ಕಪಕ್ಕದ ತಾಲೂಕುಗಳಿಗೂ ಅನುಕೂಲ

ತುಮಕೂರು ನಗರದಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ ನಿರ್ಮಾಣವಾಗುವುದರಿಂದ ತುಮಕೂರು, ಗುಬ್ಬಿ, ಕೊರಟಗೆರೆ, ಮಧುಗಿರಿ, ಸಿರಾದ ಕೆಲವು ಪ್ರದೇಶಗಳು ಹಾಗೂ ಕುಣಿಗಲ್ ತಾಲೂಕಿನ ಜನರಿಗೆ ಅನುಕೂಲವಾಗುತ್ತದೆ. ಇದಲ್ಲದೇ ತುಮಕೂರಿಗೆ ಹೊಂದಿಕೊಂಡಿರುವ ನೆಲಮಂಗಲದ ಕೆಲವು ಪ್ರದೇಶಗಳು, ದೊಡ್ಡಬಳ್ಳಾಪುರ ತಾಲೂಕು, ಮಾಗಡಿ ತಾಲೂಕು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರಿನಂತೆ ಮೂರು ಜಿಲ್ಲೆಯ ಜನರಿಗೆ ಕೂಡ ನೆರವಾಗಲಿದೆ.

ಅತ್ಯುತ್ತಮ ಸೇವೆ ಸಿಗಲಿದೆ 

ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ ೬೦೦ ಹೆರಿಗೆಗಳಾಗುತ್ತವೆ. ಪ್ರತ್ಯೇಕವಾಗಿ ತಾಯಿ ಮತ್ತು ಮಗುವಿನ ಆಸ್ಪತ್ರೆ ನಿರ್ಮಾಣದಿಂದ ಜಿಲ್ಲೆಯ ಜನತೆಗೆ ಇನ್ನೂ ಉತ್ತಮ ಸೇವೆ ಲಭ್ಯವಾಗಲಿದೆ. ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಹೆರಿಗೆ ವಿಭಾಗ ಸಂಪೂರ್ಣವಾಗಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗುತ್ತದೆ. ಜತೆಗೆ ಹೊಸ ಹುದ್ದೆಗಳು ಸಹ ಸೃಷ್ಟಿಯಾಗುತ್ತದೆ. ಜಿಲ್ಲಾ ಸರ್ಜನ್ ಅಡಿಯಲ್ಲಿ ನೂತನ ತಾಯಿ, ಮಗು ಆಸ್ಪತ್ರೆ ಕಾರ್ಯನಿರ್ವಹಿಸುತ್ತದೆ.

ಆರೈಕೆಗೆ ಹೆಚ್ಚಿನ ಸಿಬ್ಬಂದಿ

ಸದ್ಯ ಜಿಲ್ಲಾಸ್ಪತ್ರೆಯಲ್ಲಿರುವ ಹೆರಿಗೆ ಮತ್ತು ಮಕ್ಕಳ ವಿಭಾಗದಲ್ಲಿ ತಾಯಿ ಮತ್ತು ಮಗುವಿಗೆಂದು ಪ್ರತ್ಯೇಕವಾದ ಸಿಬ್ಬಂದಿಗಳಿಲ್ಲ. ಆದರೆ ಹೊಸದಾಗಿ ನಿರ್ಮಾಣವಾಗುವ ತಾಯಿ, ಮಗು ಆಸ್ಪತ್ರೆಗೆ ಪ್ರತ್ತಯೇಕವಾದ ಸಿಬ್ಬಂದಿ ನೇಮಕವಾಗುತ್ತಾರೆ. ಇದರಿಂದಾಗಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಜತೆಗೆ ಜಿಲ್ಲಾಸ್ಪತ್ರೆಯಲ್ಲಿ ಇತರೆ ರೋಗಿಗಳ ಆರೈಕೆಗೆ ಹೆಚ್ಚಿನ ಸಿಬ್ಬಂದಿ ಹಾಗೂ ಸ್ಥಳಾವಕಾಶ ಲಭ್ಯವಾಗುತ್ತದೆ.

ಕೋಟ್

ನೂತನ ತಾಯಿ ಮತ್ತು ಮಗು ಆಸ್ಪತ್ರೆಗಾಗಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರತ್ಯೇಕವಾದ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಕೇಂದ್ರ ಸರಕಾದಿಂದಲೇ ಕಟ್ಟಡ ನಿರ್ಮಾಣಕ್ಕಾಗಿ ಯೋಜನೆ ಸಿದ್ಧವಾಗಿದೆ. ಯಾವ್ಯಾವ ವಿಭಾಗಗಳು ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನು ಕೇಂದ್ರ ಸರಕಾರವೇ ನಿಗದಿತವಾಗಿ ಯೋಜನೆ ಸಿದ್ಧಪಡಿಸಿದೆ. ಆದ್ದರಿಂದ ಸ್ಥಳೀಯ ಎಂಜಿನಿಯರ್‌ಗಳು ಯೋಜನೆ ಸಿದ್ಧಪಡಿಸುವ ಅಗತ್ಯವಿರುವುದಿಲ್ಲ. ಎಲ್ಲಾ ಕಡೆಗಳಲ್ಲಿಅಧ್ಯಯನ ಮಾಡಿ ಬಹಳ ವ್ಯವಸ್ಥಿತವಾದ ಕಟ್ಟಡದ ನೀಲನಕ್ಷೆ ಸಿದ್ಧವಾಗಿರುತ್ತದೆ. ಆ ಪ್ರಕಾರವಾಗಿ ಕಟ್ಟಡ ನಿರ್ಮಾಣವಾಗಲಿ.

ಡಾ. ವೀರಭದ್ರಯ್ಯ. ಜಿಲ್ಲಾ ಸರ್ಜನ್

ಕೋಟ್

ಕೇಂದ್ರದಿಂದ ಪ್ರತಿ ರಾಜ್ಯಕ್ಕೆ  ನಾಲ್ಕೈದು   ತಾಯಿ, ಮಗುವಿನ ಆಸ್ಪತ್ರೆ ಮಂಜೂರಾಗಿದೆ. ರಾಜ್ಯದ ವಿಚಾರ ಬಂದಾಗ ರಾಜ್ಯದಲ್ಲೇ ಅತಿ ದೊಡ್ಡ ಜಿಲ್ಲೆಯಾಗಿರುವ ತುಮಕೂರಿಗೆ ತಾಯಿ, ಮಗು ಆಸ್ಪತ್ರೆ ಮಂಜೂರು ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೆ. ಆಗ ಜಿಲ್ಲೆಗೆ ಅಗತ್ಯವೇನಿದೆ ಎಂದು ಕೇಂದ್ರ ಪ್ರಶ್ನಿಸಿತ್ತು. ಈ ವೇಳೆ ನಮ್ಮ ಬೇಡಿಕೆಯನ್ನು ನಾನು ಸಮರ್ಪಕವಾಗಿ ಸಮರ್ಥನೆ ಮಾಡಿಕೊಂಡಿದ್ದೆ.

 

ಫ್ರೆಶ್ ನ್ಯೂಸ್

Latest Posts

Featured Videos