ಹಿಂಸಾತ್ಮಕ ಘರ್ಷಣೆಗೆ ಭಾರತೀಯ ಸೈನಿಕರೇ ಕಾರಣ: ಚೀನಾ

ಹಿಂಸಾತ್ಮಕ ಘರ್ಷಣೆಗೆ ಭಾರತೀಯ ಸೈನಿಕರೇ ಕಾರಣ: ಚೀನಾ

ನವದೆಹಲಿ : ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆ ಕುರಿತು ಮತ್ತೆ ಪ್ರತಿಕ್ರಿಯೆ ನೀಡಿರುವ ಚೀನಾ, ಗಡಿ ಘರ್ಷಣೆಯಲ್ಲಿ ಚೀನಾ ಸೇನೆಯಿಂದ ಯಾವುದೇ ಅಚಾತುರ್ಯ ನಡೆದಿಲ್ಲ ಎಂದು ಹೇಳಿದೆ. ಈ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜಾವೋ ಲಿಜಿಯಾನ್, ಗಡಿ ಘರ್ಷಣೆಗೆ ಸಂಪೂರ್ಣವಾಗಿ ಭಾರತೀಯ ಸೈನಿಕರ ಪ್ರಚೋದನಕಾರಿ ವರ್ತನೆಯೇ ಕಾರಣ ಎಂದು ಪುನರುಚ್ಛಿಸಿದ್ದಾರೆ. ಇದೇ ವೇಳೆ ಭಾರತದಲ್ಲಿ ಚೀನಾ ವಸ್ತುಗಳ ಬಳಕೆಗೆ ನಿಷೇಧ ಹೇರುವ ಅಭಿಯಾನ ನಡೆಯುತ್ತಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಜಾವೋ ಲಿಜಿಯಾನ್, ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿದೆ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.

ಅದಾಗ್ಯೂ ಗಡಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ತಾನು ಕಾರಣವಲ್ಲ ಎನ್ನುತ್ತಿರುವ ಚೀನಾ, ಭಾರತದಲ್ಲಿ ಚೀನಾ ವಸ್ತುಗಳ ವಿರುದ್ಧ ನಡೆಯುತ್ತಿರುವ ಅಭಿಯಾನದ ಕುರಿತೂ ತಲೆ ಕೆಡಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಭಾರತ-ಚೀನಾ ಸೈನಿಕರ ನಡುವಿನ ಭೀಕರ ಘರ್ಷಣೆ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ, ಭಾರತೀಯ ಸೈನಿಕರ ಪ್ರಚೋದನಾಕಾರಿ ವರ್ತನೆಯಿಂದಲೇ ಈ ಘನಘೋರ ದುರಂತ ಸಂಭವಿಸಿದೆ ಎಂದು ಪ್ರತಿಪಾದಿಸಿದೆ.

ಒಟ್ಟಿನಲ್ಲಿ ಭೀಕರ ಹಿಂಸಾತ್ಮಕ ಘರ್ಷಣೆಗೆ ಭಾರತೀಯ ಸೈನಿಕರೇ ಕಾರಣ ಎಂದು ವಾದಿಸುತ್ತಿರುವ ಚೀನಾ, ಇದೀಗ ಗಲ್ವಾನ್ ವ್ಯಾಲಿಯೂ ತನಗೆ ಸೇರಿದ್ದು ಎಂದು ಪಟ್ಟು ಹಿಡಿದಿದೆ.20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾ-ಭಾರತ ಯೋಧರ ಸಂಘರ್ಷದ ಬೆನ್ನಲ್ಲೇ ಈಶಾನ್ಯ ಲಡಾಖ್‌ನ ಗಲ್ವಾನ್ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕೆಲವು ಉಪಗ್ರಹ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಹರಿವನ್ನು ತಡೆಯಲು ಬಳಕೆಯಾಗುತ್ತಿತ್ತು ಎನ್ನಲಾದ ಬುಲ್ಡೋಜರ್ ಕಾಣಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos