ಡಿಸಿಎಂ ಸ್ಥಾನ ಯಾರಿಗೆ..?

ಡಿಸಿಎಂ ಸ್ಥಾನ ಯಾರಿಗೆ..?

ಬೆಂಗಳೂರು, ಡಿ. 10 : ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ರಲ್ಲಿ ಗೆದ್ದು ಕೇಸರಿ ಪಾಳಯ ಬೀಗುತ್ತಿದೆ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಜನಾದೇಶ ದೊರಕಿದ್ದು ಮುಂದಿನ ಮೂರುವರೆ ವರ್ಷ ಯಡಿಯೂರಪ್ಪ ಸರ್ಕಾರ ಸೇಫ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೂವರನ್ನು ಉಪಮುಖ್ಯಮಂತ್ರಿ ಮಾಡಿರುವ ಬಿಜೆಪಿಯಲ್ಲಿ ಇದೀಗ ಮತ್ತೊಂದು ಡಿಸಿಎಂ ಹುದ್ದೆ ಹೆಸರು ಕೇಳಿಬರುತ್ತಿದೆ. ಗೋಕಾಕ್ನಿಂದ ಗೆದ್ದಿರುವ ರಮೇಶ್ ಜಾರಕಿಹೊಳಿ, ಸಚಿವ ಶ್ರೀರಾಮುಲು ನಡುವೆ ಉಪಮುಖ್ಯಮಂತ್ರಿ ಹುದ್ದೆ ಗಿಟ್ಟಿಸಲು ಪೈಫೋಟಿ ಆರಂಭವಾಗಿದೆ.
ನಾಯಕ ಸಮುದಾಯವು ಬಿಜೆಪಿಗೆ ಭಾರೀ ಪ್ರಮಾಣದಲ್ಲಿ ಬೆಂಬಲ ನೀಡಿರುವ ಕಾರಣ ಈ ಸಮುದಾಯಕ್ಕೊಂದು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಸಚಿವ ಸಂಪುಟ ವಿಸ್ತರಣೆಯಾದಾಗ ಶ್ರೀರಾಮುಲುಗೆ ಡಿಸಿಎಂ ಪಟ್ಟ ಸಿಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಚ್ಚರಿ ಎಂಬಂತೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ವೀರಶೈವ ಸಮುದಾಯದಿಂದ ಡಿಸಿಎಂ ಹುದ್ದೆ ಗಿಟ್ಟಿಸಿದರು.
ದಲಿತ ಸಮುದಾಯದಿಂದ ಗೋವಿಂದ ಕಾರಜೋಳ ಹಾಗೂ ಒಕ್ಕಲಿಗ ಸಮುದಾಯದಿಂದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಕೂಡ ಉಪಮುಖ್ಯಮಂತ್ರಿಯಾದರು. ನಂತರ ನಡೆದ ಬೆಳವಣಿಗೆಯಲ್ಲಿ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿತ್ತು. ಇದರ ನಡುವೆ ಗೋಕಾಕ್ನಲ್ಲಿ ಅದೇ ಸಮುದಾಯದ ರಮೇಶ್ ಜಾರಕಿಹೊಳಿ ಕೂಡ ಗೆದ್ದು ಬಂದಿರುವುದರಿಂದ ಅವರು ಕೂಡ ಇದೇ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ನಾನು ಚುನಾವಣೆಯಲ್ಲಿ ಗೆದ್ದರೆ ಜಲಸಂಪನ್ಮೂಲ ಜತೆಗೆ ಉಪಮುಖ್ಯಮಂತ್ರಿಯಾಗಲಿದ್ದೇನೆ ಎಂದು ಮತದಾರರಿಗೆ ಹೇಳಿದ್ದರು. ಸದ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ ಮುಂದೆ ಇನ್ನೊಂದು ಡಿಸಿಎಂ ಹುದ್ದೆ ಸೃಷ್ಟಿಸುವುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ರಮೇಶ್ ಜಾರಕಿಹೊಳಿ ತಮಗೇ ನೀಡಬೇಕೆಂದು ಪಟ್ಟು ಹಿಡಿದರೆ ವಿಧಿಯಿಲ್ಲದೆ ಅವರನ್ನು ಉಪಮುಖ್ಯಮಂತ್ರಿ ಮಾಡಲೇಬೇಕಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos