ಶತಮಾನದ ಶಾಲೆಗಿಲ್ಲ ಕಾಯಕಲ್ಪ

ಶತಮಾನದ ಶಾಲೆಗಿಲ್ಲ ಕಾಯಕಲ್ಪ

ದೇವನಹಳ್ಳಿ:ಶತಮಾನದಷ್ಟು ಹಳೆಯದಾದ ತಾಲ್ಲೂಕಿನ ಆರುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಬೇಕಾಗಿದೆ. ಶಿಥಿಲ ಕಟ್ಟಡ, ಮೈದಾನದ ತುಂಬಾ ಬೆಳೆದ ಕಳೆಗಿಡಗಳು. ಹೀಗೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.
ಆವರಣದಲ್ಲಿ ಸಮೃದ್ಧವಾಗಿ ಬೆಳೆದಿರುವ ವಿವಿಧ ಜಾತಿಯಮರಗಳು, ಹಸಿರನ್ನೆ ಹೊದಿಕೆ ಮಾಡಿಕೊಂಡಿರುವ ಮೈದಾನದ ನೆಲ, ಶಿಥಿಲಗೊಂಡಿರುವ ಶಾಲಾ ಕೊಠಡಿ ಇದು ಸದ್ಯದ ಸ್ಥಿತಿ. ಶಾಲೆಯಲ್ಲಿ ಲಭ್ಯವಿರುವ ದಾಖಲಾತಿಯಂತೆ ೧೮೮೪ ರಲ್ಲಿ ಆರಂಭಗೊಂಡ ಪ್ರಾಥಮಿಕ ಶಾಲೆ ಇದಾಗಿದ್ದು ೧೯೩೮ ರಲ್ಲಿ ಮಾಧ್ಯಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದೆ. ಸಾವಿರಾರು ಪ್ರತಿಭಾನ್ವಿತರನ್ನು ಈ ಶಾಲೆ ಬೆಳಕಿಗೆ ತಂದಿದೆ.
ಸ್ವಾತಂತ್ರ‍್ಯ ಪಡೆಯುವ ಕಿಚ್ಚು ಹೆಚ್ಚಾಗಿದ್ದ ಕಾಲಘಟ್ಟದಲ್ಲಿ ಹನ್ನೆರಡು ಗ್ರಾಮಗಳಿಗೆ ಅನುಕೂಲವಾಗಲು ವೀರಪ್ಪ, ಎಚ್.ಆಂಜಿನಪ್ಪ ಎಂಬುವರು ಶಾನುಭೋಗರಿಂದ ಬ್ರಿಟಿಷ್ ಸರ್ಕಾರದ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿ ಅವರ ಅನುಮತಿಯೊಂದಿಗೆ ಮನೆಯಲ್ಲೇ ಹತ್ತಾರು ಮಕ್ಕಳನ್ನು ಸೇರಿಸಿಕೊಂಡು ಶಿಕ್ಷಣ ಆರಂಭಿಸಿದ್ದರು ಎಂದು ನಮ್ಮ ತಂದೆಯವರು ಹೇಳುತ್ತಿದ್ದರು. ಅವರು ಸಹ ಈ ಶಾಲೆಯ ವಿದ್ಯಾರ್ಥಿಯಾಗಿದ್ದರು ನಾವು ಸಹ ಅಗಿನಕಾಲದ ಎಲ್.ಎಸ್. ತರಗತಿಯನ್ನು ವ್ಯಾಸಂಗ ಮಾಡಿದ್ದೇನೆ ಎನ್ನುತ್ತಾರೆ ಸ್ಥಳೀಯ ನಿವಾಸಿ ೮೨ ವರ್ಷದ ನಾರಾಯಣಸ್ವಾಮಿ. ಪ್ರಭಾರ ಮುಖ್ಯಶಿಕ್ಷಕ ಯತೀಶ್ ಕುಮಾರ್ ಮಾತನಾಡಿ, ‘ನಾಲ್ಕೈದು ವರ್ಷಗಳ ಹಿಂದೆ ಮಕ್ಕಳ ಹಾಜರಾತಿ ತೀರಾ ಕಡಿಮೆ ಇತ್ತು. ಶಿಕ್ಷಕರ ಕೊರತೆಯೂ ಇತ್ತು. ಪ್ರಸ್ತುತ ೪೭ ವಿದ್ಯಾರ್ಥಿಗಳಿಗೆ ನಾಲ್ವರು ಶಿಕ್ಷಕರಿದ್ದೇವೆ. ಆರು ಕೊಠಡಿ ಪೈಕಿ ಮೂರು ಶಿಥಿಲಗೊಂಡಿವೆ. ಶಾಲಾ ಅಂಗಳದಲ್ಲಿ ವಿವಿಧ ಜಾತಿಯ ೧೫೦ ಮರಗಳನ್ನು ಬೆಳೆಸಲಾಗಿದ್ದು ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ. ಶತಮಾನದ ಶಾಲೆಯಲ್ಲಿ ನಾವು ಶಿಕ್ಷಕರಾಗಿರುವುದು ನಮಗೆ ಹೆಮ್ಮೆ ಇದೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos