ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್,ಡಿ .8 : ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್ನ 16ನೇ ಓವರ್ನಲ್ಲಿ ವಿಂಡೀಸ್ ಬೌಲರ್ ಕೇಸ್ರಿಕ್ ವಿಲಿಯಮ್್ಸ ಎಸೆತದಲ್ಲಿ ಮನಮೋಹಕ ಸಿಕ್ಸರ್ ಸಿಡಿಸಿದ ಕೊಹ್ಲಿ, ಕಾಲ್ಪನಿಕ ನೋಟ್ಬುಕ್ ತೆಗೆದು ಅದರಲ್ಲಿ ಟಿಕ್ ಮಾಡಿಕೊಳ್ಳುವಂತೆ ವಿಶೇಷ ರೀತಿಯ ಸಂಭ್ರಮ ವ್ಯಕ್ತಪಡಿಸಿದರು.
ಕೇಸ್ರಿಕ್ ಅವರೇ ಯಾವಾಗಲೂ ವಿಕೆಟ್ ಕಿತ್ತಾಗ ಸಂಭ್ರಮಿಸುವ ‘ನೋಟ್ಬುಕ್ ಸ್ಟೈಲ್’ನ ಅನುಕರಣೆ ಇದಾಗಿತ್ತು. 2017ರಲ್ಲಿ ಭಾರತ ತಂಡ ವಿಂಡೀಸ್ ಪ್ರವಾಸ ಕೈಗೊಂಡಿದ್ದಾಗ ಜಮೈಕಾದಲ್ಲಿ ನಡೆದ ಟಿ20 ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಕಬಳಿಸಿದ್ದ ಕೇಸ್ರಿಕ್ ಇದೇ ‘ನೋಟ್ಬುಕ್ ಸ್ಟೈಲ್’ನಲ್ಲಿ ಸಂಭ್ರಮಿಸಿದ್ದರು. ಅದನ್ನು ಇನ್ನೂ ನೆನಪಿನಲ್ಲಿಟ್ಟುಕೊಂಡಿದ್ದ ಕೊಹ್ಲಿ ಮುಯ್ಯಿ ತೀರಿಸಿಕೊಂಡರೆ, ಕೇಸ್ರಿಕ್ ತಮ್ಮ ನೋವನ್ನು ನಗುಮೊಗದೊಂದಿಗೆ ಮರೆಮಾಚಿದರು.
ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, ‘ಜಮೈಕಾದಲ್ಲಿ ನನ್ನ ವಿಕೆಟ್ ಕಿತ್ತಾಗ ಕೇಸ್ರಿಕ್ ಇದೇ ರೀತಿ ಸಂಭ್ರಮಿಸಿದ್ದರು. ಹೀಗಾಗಿ ಈ ಬಾರಿ ನಾನೂ ಕೂಡ ನೋಟ್ಬುಕ್ನಲ್ಲಿ ಕೆಲ ಟಿಕ್ ಮಾಡಿಕೊಳ್ಳಲು ನಿರ್ಧರಿಸಿದೆ. ಆದರೆ ಎಲ್ಲವೂ ನಗುವಿನೊಂದಿಗೆ ಕೊನೆಗೊಂಡಿತು. ನಾವೆಲ್ಲರೂ ಸ್ಪರ್ಧಾತ್ಮಕ ಕ್ರಿಕೆಟ್ ಬಯಸುತ್ತೇವೆ. ಅದೇ ವೇಳೆ ಎದುರಾಳಿ ಮೇಲೆ ಗೌರವ ಹೊಂದಿರುತ್ತೇವೆ’ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos