ಆ್ಯಸಿಡ್ ಬಾಟಲಿ ಖರೀದಿಸಿದ ನಟಿ ದೀಪಿಕಾ ಪಡುಕೋಣೆ

ಆ್ಯಸಿಡ್ ಬಾಟಲಿ ಖರೀದಿಸಿದ ನಟಿ ದೀಪಿಕಾ ಪಡುಕೋಣೆ

ನವದೆಹಲಿ, ಜ.16: ಸುಪ್ರೀಂಕೋರ್ಟ್ ನಿಯಮ ನಿಬಂಧನೆಗಳ ಪ್ರಕಾರ ಆ್ಯಸಿಡ್ ಖರೀದಿಸಬೇಕು ಎಂದರೆ ಖರೀದಿಸುವ ವ್ಯಕ್ತಿಯ ಗುರುತಿನಚೀಟಿ ಪರಿಶೀಲಿಸಿ, ವಿಳಾಸವನ್ನೂ ಅಂಗಡಿಯವ ಪಡೆಯಬೇಕು. ಆ ಬಳಿಕ ಇಂತಹವರು ಆ್ಯಸಿಡ್ ಖರೀದಿಸಿದ್ದಾರೆಂದು ಪೊಲೀಸರಿಗೆ ಮಾಹಿತಿ ನೀಡಬೇಕು. ಆದರೆ ಆ್ಯಸಿಡ್ ಖರೀದಿಸಬೇಕಾದರೆ ಈ ನಿಯಮಗಳು ಯಾವುದನ್ನೂ ಪಾಲಿಸುತ್ತಿಲ್ಲ ಎಂದಿದ್ದಾರೆ ದೀಪಿಕಾ ಪಡುಕೋಣೆ. ಇದಕ್ಕಾಗಿ ಅವರು ಸ್ಟಿಂಗ್ ಆಪರೇಷನ್ ಸಹ ಮಾಡಿದ್ದಾರೆ.

ಆ್ಯಸಿಡ್ ದಾಳಿಯನ್ನು ತಡೆಯಲು ಮತ್ತೊಂದು ಪ್ರಯೋಗವನ್ನು ಮಾಡಿದ್ದಾರೆ. ಅಂಗಡಿಗಳಲ್ಲಿ ಬೇಕಾಬಿಟ್ಟಿ ಆ್ಯಸಿಡ್ ಮಾರಾಟ ಮಾಡಲಾಗುತ್ತಿದೆ, ಯಾರೂ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದಲ್ಲಿ ಆ್ಯಸಿಡ್ ಖರೀದಿಸುವುದು ತುಂಬಾ ಸುಲಭ, ತಮ್ಮ ತಂಡದ ಮೂಲಕ 24 ಆ್ಯಸಿಡ್ ಬಾಟಲಿಗಳನ್ನು ಖರೀಸಿದ್ದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಛಪಾಕ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರವಾಲ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನವರಿ 10ರಂದು ರಿಲೀಸ್ ಆದ ಈ ಸಿನಿಮಾ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ.

ಈ ಸಿನಿಮಾ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು ದೀಪಿಕಾ. ಅದರಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತರನ್ನು ಸಮಾಜ ಹೇಗೆಲ್ಲಾ ನೋಡುತ್ತದೆ ಎಂಬುದನ್ನು ತೋರಿಸಿದ್ದರು. ಮಾರುವೇಷದಲ್ಲಿದ್ದ ದೀಪಿಕಾರನ್ನು ಯಾರೂ ಕಂಡುಹಿಡಿಯಲಿಲ್ಲ.

ಇದೀಗ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ ದೀಪಿಕಾ. ಈ ವಿಡಿಯೋದಲ್ಲೂ ದೀಪಿಕಾ ಅವರ ತಂಡದ ಸದಸ್ಯರು ಉದ್ಯಮಿ, ವಿದ್ಯಾರ್ಥಿ, ಗೃಹಿಣಿ, ಪ್ಲಂಬರ್ ಹೀಗೆ ನಾನಾ ವೇಷಗಳಲ್ಲಿ ಮಳಿಗೆಗಳಲ್ಲಿ ಆ್ಯಸಿಡ್ ಖರೀದಿಸಿದ್ದಾರೆ. ಇದನ್ನು ಸ್ವತಃ ದೀಪಿಕಾ ಕಾರಿನಲ್ಲಿ ಕುಳಿತು ನೋಡುತ್ತಿದ್ದರು.

ಮಳಿಗೆಗಳಲ್ಲಿ ಯಾರೂ ಗುರುತಿನಪತ್ರ ಕೇಳುತ್ತಿರಲಿಲ್ಲ. ಆ್ಯಸಿಡ್ ನೀಡುತ್ತಿದ್ದರು. ಕೆಲವರು ಮಾತ್ರ ಐಡಿ ಕೇಳಿದ್ದಾರೆ. ಸುಪ್ರೀಂ ಕೋರ್ಟ್ ನಿಯಮಗಳು ಜಾರಿಯಲ್ಲಿ ಇದ್ದರೂ ಒಂದೇ ದಿನದಲ್ಲಿ 24 ಆ್ಯಸಿಡ್ ಬಾಟಲಿ ಖರೀಸಿದ್ದೇನೆ ಎಂದರೆ ನಂಬಲಿಕ್ಕೇ ಆಗುತ್ತಿಲ್ಲ ಎಂದು ದೀಪಿಕಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ್ಯಸಿಡ್ ಖರೀದಿ, ಮಾರಾಟವನ್ನು ತಡೆಯಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos