ಮಾರ್ಗಸೂಚಿಯನ್ವಯ ಗಣೇಶೋತ್ಸವ ಆಚರಿಸಿ

  • In State
  • August 20, 2020
  • 161 Views
ಮಾರ್ಗಸೂಚಿಯನ್ವಯ ಗಣೇಶೋತ್ಸವ ಆಚರಿಸಿ

ತುಮಕೂರು:ಜಿಲ್ಲೆಯಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ನು ಅನುಸರಿಸಿ ಗಣೇಶೋತ್ಸವವನ್ನು ಆಚರಿಸುವಂತೆ ಜಿಲ್ಲಾಧಿಕಾರಿ ಡಾ|| ರಾಕೇಶ್‌ಕುಮಾರ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗಣೇಶೋತ್ಸವ ಕುರಿತ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೊರೊನಾ ರೋಗವನ್ನು ನಿಯಂತ್ರಿಸುವ ಸಲುವಾಗಿ ಗಣೇಶೋತ್ಸವವನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಆಚರಿಸಲು ನಿರ್ದೇಶಿಸಿದ್ದು, ಅದರಂತೆ ಗಣೇಶನ ಮೂರ್ತಿಗಳನ್ನು ಷರತ್ತಿಗೊಳಪಟ್ಟು ಪ್ರತಿಷ್ಠಾಪಿಸಬೇಕೆಂದು ಅವರು ತಿಳಿಸಿದರು.

ಗಣೇಶ ಹಬ್ಬವನ್ನು ಭಕ್ತಿಪೂರ್ವಕವಾಗಿ ದೇವಸ್ಥಾನ, ಮನೆ, ಸರ್ಕಾರಿ/ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬೇಕು. ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ೪ ಅಡಿ, ಮನೆಗಳಲ್ಲಿ ೨ ಅಡಿಗೆ ಮೀರದಂತೆ ಪ್ರತಿಷ್ಠಾಪಿಸಬೇಕು. ಪಾರಂಪರಿಕ ಗಣೇಶೋತ್ಸವಕ್ಕಾಗಿ ಸಮಿತಿಗಳು/ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮುನಿಸಿಪಲ್ ಕಾರ್ಪೋರೇಶನ್/ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯಬೇಕು. ಒಂದು ವಾರ್ಡಿಗೆ/ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವವನ್ನು ಮಾತ್ರ ಆಚರಿಸಲು ಪ್ರೋತ್ಸಾಹಿಸುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಸ್ಥಳಗಳಲ್ಲಿ ೨೦ ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು. ೨೦ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡುವುದು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ/ಸಂಗೀತ/ನೃತ್ಯ ಇನ್ನಿತರೆ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ. ಈ ಬಗ್ಗೆ ಪೊಲೀಸ್ ಹಾಗೂ ಸಂಬಂಧಿಸಿದ ಇಲಾಖೆಗಳು ಕ್ರಮವಹಿಸುವಂತೆ  ಅವರು ಸೂಚಿಸಿದರು.

ಗಣೇಶ ಮೂರ್ತಿ ತರುವಾಗ/ವಿಸರ್ಜಿಸುವಾಗ ಮೆರವಣಿಗೆ ಮಾಡುವುದನ್ನು ಹಾಗೂ ಪಠಾಕಿ ಮತ್ತು ಸ್ಫೋಟಕ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು. ಸರ್ಕಾರಿ/ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಸಮೀಪವಿರುವ ಮಾರ್ಗಗಳನ್ನು ಬಳಸಿಕೊಂಡು ಮಹಾನಗರ ಪಾಲಿಕೆ/ಜಿಲ್ಲಾಡಳಿತ/ಹತ್ತಿರದ ಸ್ಥಳೀಯ ಸಂಸ್ಥೆಗಳ/ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಿರ್ಮಿಸಲಾದ ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕು ಎಂದು ಅವರು ತಿಳಿಸಿದರು.

ಗಣೇಶ ಚರ್ತುಥಿ ಆಚರಿಸುವ ದೇವಸ್ಥಾನ/ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡುವುದು ಹಾಗೂ ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿಗಳಿಗೆ ಸ್ಯಾನಿಟೈಜರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದು. ದರ್ಶನಕ್ಕೆ ಬರುವ ಭಕ್ತಾಧಿಗಳು ೬ ಅಡಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅವರು ಸೂಚಿಸಿದರು.

ಕೋವಿಡ್-೧೯ ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು  ಕಡ್ಡಾಯವಾಗಿ ಪಾಲಿಸತಕ್ಕದ್ದು. ಅಲ್ಲದೇ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಅವರು ತಿಳಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos