ಅವಳಿನಗರದಲ್ಲಿ ಸಂಕ್ರಾಂತಿ ಸಡಗರ

ಅವಳಿನಗರದಲ್ಲಿ ಸಂಕ್ರಾಂತಿ ಸಡಗರ

ಹುಬ್ಬಳ್ಳಿ, ಜ. 14: ಸಂಕ್ರಾಂತಿ ಹಬ್ಬದ ಸಿದ್ಧತೆ ನಗರದಲ್ಲಿ ಜೋರಾಗಿ ನಡೆದಿದೆ. ಇಂದು ಮತ್ತು ನಾಳೆ ಹಬ್ಬ ಆಚರಣೆ ಮಾಡುತ್ತಿರುವುದರಿಂದ ಇಂದು ಬೆಳಿಗ್ಗೆ ಯಿಂದಲ್ಲೇ ಹಬ್ಬದ ನಿಮಿತ್ತ ಸಾಮಗ್ರಿಗಳ ಖರೀದಿ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿತು.

ಇಂದು ಹೆಣ್ಣು ಮಕ್ಕಳ ಭೋಗಿಯ ಹಿನ್ನೆಲೆ ವಿವಿಧ ಧಾರ್ಮಿಕ ಕೈಂಕರ್ಯಗಳು ಮನೆಗಳಲ್ಲಿ ಜರುಗಿದವು. ನಾಳೆ ಎಳ್ಳಿನ ಹಿಟ್ಟಿನ ಸ್ನಾನ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವರು. ಬಳಿಕ ಎಳ್ಳು, ಕ್ಯಾರಿಕಾಯಿ, ಕಡಲೆಕಾಯಿ, ಕಬ್ಬು, ಜಾಪಳಕಾಯಿ ಹೀಗೆ ವಿವಿಧ ತಿನಿಸು, ಹಧಿಣ್ಣುಗಳನ್ನು ತಿನ್ನುವ ಮೂಲಕ ಭೋಗಿಯನ್ನು ಆಚರಿಸುವರು.

ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದಲೇ ದರ ಏರಿಕೆಯ ನಡುವೆಯೂ ಕಡಲೆಕಾಯಿ, ಕ್ಯಾರಕಾಯಿ, ಕಬ್ಬು, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಹೂ, ಹಣ್ಣು ಖರೀದಿ ಭರಾಟೆ ಜೋರಾಗಿದೆ. ಮನೆ ಮನೆಗಳಲ್ಲಿ ಆಚರಿಸುವ ಹಬ್ಬದ ಸಂಭ್ರಮಕ್ಕೆ ಕಳೆದ ಕೆಲವು ದಿನಗಳಿಂದ ಎಳ್ಳು ಮಿಶ್ರಣಕ್ಕೆ ಪದಾರ್ಥಗಳನ್ನು ಕೊಳ್ಳುವ ಕಾರ್ಯ ನಡೆದಿದ್ದು, ಸೋಮವಾರ ಮತ್ತು ಮಂಗಳವಾರ ಇದರ ಭರಾಟೆ ಹೆಚ್ಚಾಗಿತ್ತು. ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ದರ ಸ್ವಲ್ಪ ಹೆಚ್ಚಾಗಿದೆ. ಹೂ, ಹಣ್ಣು ಮಾರುಕಟ್ಟೆಗೆ ಹೆಚ್ಚಾಗಿ ಬಂದಿದೆ. ಕಬ್ಬಂತೂ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಗರದಲ್ಲಿ ಕಾಣಿಸಿಕೊಂಡಿದೆ.

ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರದ ಜನತಾ ಬಜಾರ, ಗಾಂಧಿ ಮಾರ್ಕೆಟ್ ಸೇರಿದಂತೆ ನಗರದ ವಿವಿಧ ವೃತ್ತಗಳು, ಪ್ರಮುಖ ವಾಣಿಜ್ಯ ಕೇಂದ್ರಗಳು, ಬಡಾವಣೆಗಳ ಪ್ರಮುಖ ಸ್ಥಳಗಳಲ್ಲಿ ಕಬ್ಬು ಜಲ್ಲೆ, ಹೂ, ಹಣ್ಣುಗಳ ಮಾರಾಟ ಭರದಿಂದ ಸಾಗಿದೆ. ಅಂಗಡಿಗಳಲ್ಲಿ ಸಿದ್ಧಪಡಿಸಿದ ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಖರೀದಿಯೂ ಜೋರಾಗಿದೆ.

ಸಾಮಾನ್ಯವಾಗಿ ಸಂಕ್ರಾಂತಿಗೆ ಎಲ್ಲ ತರಕಾರಿಗಳನ್ನು ಹಾಕಿ ಸಾಂಬಾರ್ ಮಾಡುವುದು ವಾಡಿಕೆ. ಇದರಿಂದ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಕುಂಬಳಕಾಯಿ, ಅವರೆಕಾಯಿ, ಸೋರೆಕಾಯಿ, ಬದನೆ, ಟೊಮೆಟೊ, ಕ್ಯಾರೇಟ್, ಬೀನ್ಸ್, ಹಸಿಮೆಣಸಿನಕಾಯಿ ಹೀಗೆ ಬಹುತೇಕ ತರಕಾರಿಗಳ ಬೆಲೆಗಳು ಸಗಟು ಮಾರುಕಟ್ಟೆಯಲ್ಲಿ ಏರಿಕೆ ಕಾಣದಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ತುಸು ಏರಿಕೆ ಕಂಡಿವೆ.

ಹಬ್ಬದ ಸಡಗರ: ಹಿಂದೂಗಳ ಪಾಲಿಗೆ ಸಂಕ್ರಾಂತಿ ಸಡಗರದ ಹಬ್ಬ. ಕೌಟುಂಬಿಕ ಭ್ರಾಂತಿಗಳನ್ನು ದೂರ ಮಾಡಿ ನವಕ್ರಾಂತಿ ತರುವ ಕಾಲ. ಈ ಕಾರಣಕ್ಕಾಗಿಯೇ ಹಳ್ಳ- ಕೊಳ್ಳಗಳ ಬಳಿ ಹೋಗಿ ಪುಣ್ಯಸ್ನಾನ ಮಾಡಿಬರುವ ಆಚರಣೆ ಇದೆ. ಸೂರ್ಯನ ಹಾಗೆಯೇ ಬದುಕಿನ ಚಲನೆಗಳು ಬದಲಾಗಲಿ ಎನ್ನುವುದು ಹಬ್ಬದ ಸಂದೇಶ.

ಕೋಲೆ ಬಸವ ಕಣ್ಮರೆ: ಮಕರ ಸಂಕ್ರಮಣದ ದಿನ ನಿಮಗೆ ಕೋಲೆ ಬಸವ ನೆನಪಾಗದೇ ಇರಲಾರ. ಎತ್ತಿನ ಬೆನ್ನ ಮೇಲೆ ಗರಿಗರಿ ಬಟ್ಟೆ ಹಾಕಿ, ಕೋಡಂಚುಗಳಿಗೆ ಬಣ್ಣ ಬಳಿದು, ಕಾಲಿಗೆ ಗೆಜ್ಜೆ ಗಟ್ಟಿ, ಕೊರಳಿಗೆ ಗಂಟೆ ಗಟ್ಟೆ, ತುತ್ತೂರಿ ಊದುತ್ತ ಮನೆಮುಂದೆ ಬರುವ ಕೋಲೆಬಸವನನ್ನು ಚಿಕ್ಕವರಿದ್ದಾಗ ನೋಡಿರುತ್ತೇವೆ. ಸಂಕ್ರಾಂತಿ ಬಂದಾಗೆಲ್ಲ ಆ ಕೋಲೆಬಸವ ಶ್ರೀಮಂತ ಜನಪದ ಸಂಸ್ಕೃತಿಯೊಂದನ್ನು ನಮ್ಮ ಸ್ಮೃತಿಪಟಲದ ಮೇಲೆ ಹಾಗೆಯೇ ಮರೆಮಾಚುತ್ತಾನೆ.

ಫ್ರೆಶ್ ನ್ಯೂಸ್

Latest Posts

Featured Videos