ಆಕರ್ಷಿಸುವ ಮಂಜರಾಬಾದ್ ಕೋಟೆ

ಆಕರ್ಷಿಸುವ ಮಂಜರಾಬಾದ್ ಕೋಟೆ

ಹಾಸನ ,ಡಿ. 14 : ಸಕಲೇಶಪುರವು ಬಹಳಷ್ಟು ಪ್ರಾಕೃತಿಕ ಸ್ಥಳಗಳು ಮತ್ತು ಕಣ್ಣಿಗೆ ಕಟ್ಟುವಂತಹ ನೈಸರ್ಗಿಕ ದೃಶ್ಯಗಳಿಂದ ಮತ್ತು ಮನೋಹರವಾದ ಕಲೆ ಮತ್ತು ವಾಸ್ತುಶಿಲ್ಪಗಳಿಂದ ಕೂಡಿದ ಜನಪ್ರಿಯ ಪ್ರವಾಸಿ ತಾಣಗಳಿಂದ ಕೂಡಿದೆ. ಈ ಪ್ರದೇಶವು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ, ಆರಾಧಿಸುವ ರಸಿಕರ ಚಿತ್ತವನ್ನು ಆಕರ್ಷಿಸುವ ದಟ್ಟ ಅರಣ್ಯಗಳಿಂದಲೂ, ಬೆಟ್ಟಗುಡ್ಡಗಳಿಂದಲೂ, ನದಿಗಳಿಂದಲೂ, ಜಲಪಾತಗಳಿಂದಲೂ, ನೀರಿನ ಝರಿಗಳಿಂದಲೂ ಮತ್ತು ಗಿರಿಕಂದರಗಳಿಂದಲೂ ಕೂಡಿದೆ. ಪಶ್ಚಿಮ ಘಟ್ಟಗಳಲ್ಲಿರುವ ಪುಷ್ಪಗಿರಿ, ಬಿಸಲೆ ಅರಣ್ಯ ಶ್ರೇಣಿ, ಹಿರೇಕಲ್ ಗಿರಿ ಶ್ರೇಣಿ, ಮತ್ತು ನಿತ್ಯ ಹರಿದ್ವರ್ಣ ಕಾಡುಗಳು ಪ್ರತಿಯೊಬ್ಬರ ಗಮನವನ್ನು ಸೆಳೆಯುತ್ತವೆ.
ಮಂಜರಾಬಾದ್ ಕೋಟೆಯು ಸಕಲೇಶಪುರದಿಂದ ನೈರುತ್ಯ ದಿಕ್ಕಿಗೆ 5 ಕಿ.ಮೀ ದೂರದಲ್ಲಿದೆ. ಈ ಕೋಟೆಯನ್ನು ಭೂಮಟ್ಟದಿಂದ ಸುಮಾರು 988 ಮೀಟರ್ ಎತ್ತರದ ಗುಡ್ಡದ ಮೇಲೆ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 48ರ ಮೂಲಕ ಹೋಗುವಾಗ ಎಡಬದಿಯ ರಸ್ತೆಯಲ್ಲಿ ತಿರುಗಿ ಹೋದರೆ ಕೋಟೆಯನ್ನು ತಲುಪಬಹುದು. ಈ ಕೋಟೆಯನ್ನು 1792ರಲ್ಲಿ ಟಿಪ್ಪೂಸುಲ್ತಾನನು ನಿರ್ಮಿಸಿರುತ್ತಾನೆ. ಟಿಪ್ಪೂಸುಲ್ತಾನನು ಈ ಕೋಟೆಯಿಂದ ಮಂಜಿರಾಬಾದಿನ (ಮಂಜು ತುಂಬಿದ) ಪ್ರಕೃತಿ ಸೌಂದರ್ಯವನ್ನು ನೋಡಿ ಬೆಕ್ಕಸಬೆರಗಾದನೆಂದೂ ಆದಕಾರಣ, ಈ ಕೋಟೆಗೆ ಮಂಜರಾಬಾದ್ ಕೋಟೆ ಎಂದೇ ಹೆಸರಾಯಿತು ಎಂದು ತಿಳಿಯಲಾಗಿದೆ. ಈ ಕೋಟೆಯ ಗೋಡೆಯ ಮೇಲೆ ನಿಂತು ಸುತ್ತ ನೋಡಿದಾಗ ಮಾತ್ರ ಪ್ರಕೃತಿಯ ಮಾಂತ್ರಿಕ ಸೌಂದರ್ಯವು ಅನುಭವಕ್ಕೆ ಬರುತ್ತದೆ. ಹಸಿರು ಹೊದ್ದು, ಉಬ್ಬುತಗ್ಗುಗಳಿಂದ ಕೂಡಿದ ಬೆಟ್ಟಗುಡ್ಡಗಳು, ದಟ್ಟಾರಣ್ಯಗಳು, ಗಿರಿಕಂದರಗಳು, ಮತ್ತು ಝರಿಗಳು ಮುಂತಾದ ಪ್ರಕೃತಿಯ ಕೊಡುಗೆಗಳನ್ನು ನೋಡಿ ಕಣ್ತುಂಬಿಕೊಂಡೇ ಪ್ರಕೃತಿಪ್ರಿಯರು ಮಂತ್ರಮುಗ್ಧರಾಗಿ ಮನಗಾಣಬೇಕು.

ಫ್ರೆಶ್ ನ್ಯೂಸ್

Latest Posts

Featured Videos