ಪುರಸಭೆಯಿಂದ 6 ಮೀನು ಮಾರಾಟ ಮಳಿಗೆ ಬಂದ್

ಪುರಸಭೆಯಿಂದ 6 ಮೀನು ಮಾರಾಟ ಮಳಿಗೆ ಬಂದ್

ಬೇಲೂರು, ನ. 22: ಪಟ್ಟಣದ ಮುಖ್ಯರಸ್ತೆಯ ಶಿವಜ್ಯೋತಿಫಣ ಗಾಣಿಗರ ಸಂಘದ ಕಟ್ಟಡದ ವಾಣಿಜ್ಯ ಮಳಿಗೆ ಸೇರಿದಂತೆ ಲೈಸನ್ಸ್ ಇಲ್ಲದೆ ನಡೆಸುತ್ತಿದ್ದ 6 ಮೀನು ಮಾರಾಟ ಮಳಿಗೆಯನ್ನು ಪುರಸಭೆಯಿಂದ ಬಂದ್ ಮಾಡಲಾಯಿತು.

ನೆನ್ನೆ ಬೆಳಿಗ್ಗೆ ಪೊಲೀಸ್ ರಕ್ಷಣೆಯಲ್ಲಿ ಪುರಸಭೆಯ ಅಧಿಕಾರಿ, ಸಿಬ್ಬಂದಿಗಳು ತೆರಳಿ ಮೀನು ಮಾರಾಟ ಮಳಿಗೆ ಬಂದ್ ಮಾಡಿಸಿದ್ದಲ್ಲದೆ ಮಳಿಗೆಗೆ ಸಂಬಂಧಿಸಿದ ನೀರು ಬಂದ್ ಮಾಡಿಸಿದರು. ಇದೆ ವೇಳೆ ಮಳಿಗೆಯ ಮುಂಭಾಗದ ಚರಂಡಿಯ ಚಪ್ಪಡಿ ತೆರವುಗೊಳಿಸಿ ಶುಚಿಗೊಳಿಸಿದರು.

ಮೀನು ಮಾರಾಟದ ಹಾಲಿ ಸ್ಥಳವು ಮುಖ್ಯರಸ್ತೆಯ ಸಮೀಪ ಇರುವುದರಿಂದ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ಪುರಸಭೆಯಿಂದ ಯಗಚಿ ನದಿಗೆ ತೆರಳುವ ಮಾರ್ಗದ ಬಳಿ 6 ಹೊಸ ಮಳಿಗೆಗಳ ನಿರ್ಮಿಸಿ ಹರಾಜು ಮೂಲಕ ಬಾಡಿಗೆ ವಿಲೇವಾರಿ ಮಾಡಲಾಗಿತ್ತು.

ಈ ಸಂದರ್ಭ ಖಾಸಗಿ ಮಳಿಗೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದವರನ್ನು ವ್ಯಾಪಾರ ನಿಲ್ಲಿಸುವಂತೆ ಸೂಚಿಸಿದರೂ ಮಾರಾಟ ಮಾಡುವುದನ್ನು ನಿಲ್ಲಿಸಿರಲಿಲ್ಲ. ಈ ಸಂಬಂಧ ವ್ಯಾಪಾರಿಗಳಿಗೆ ಪುರಸಭೆಯಿಂದ ನೊಟೀಸ್ ನೀಡಲಾಯಿತು. ನೊಟೀಸ್ ಪಡೆದ ವರ್ತಕರು ನ್ಯಾಯಾಲಯದ ಮೆಟ್ಟಿಲೇರಿ ತೆರವುಗೊಳಿಸದಂತೆ ತಡೆಯಾಜ್ಞೆ ತಂದಿದ್ದರು.

ತಡೆಯಾಜ್ಞೆ ವಿರುದ್ಧ ನ್ಯಾಯಾಲಯಕ್ಕೆ ತೆರಳಿದ ಪುರಸಭೆಯ ಪರವಾಗಿ ಹೈಕೋರ್ಟ್ನಲ್ಲಿ ತೀರ್ಪು ಬಂದ ಹಿನ್ನಲೆಯಲ್ಲಿ ಇಂದು ತೆರವು ಕಾರ್ಯಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos