ಬೆಂಗಳೂರು: ಬಾಲಿವುಡ್ ಮಂದಿ ಎಲ್ಲ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ವರ್ಷದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮುಂಬೈನ ಜುಹೂನಲ್ಲಿ ಕಪೂರ್ ಕುಟುಂಬದವರು ಔತಣ ಕೂಟ ಆಯೋಜಿಸಿದ್ದಾರೆ. ಇದರಲ್ಲಿ ಭಾಗಿಯಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಮಗಳನ್ನು ಕೂಡ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಪುತ್ರಿಯ ಮುಖವನ್ನು ತೋರಿಸಿದ್ದಾರೆ.
ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ದಂಪತಿಯ ಅಭಿಮಾನಿಗಳಿಗೆ ಈ ವರ್ಷದ ಕ್ರಿಸ್ಮಸ್ ತುಂಬ ಸ್ಪೆಷಲ್ ಆಗಿದೆ. ಅದಕ್ಕೆ ಒಂದಷ್ಟು ಕಾರಣಗಳು ಇವೆ. ಇದೇ ಮೊದಲ ಬಾರಿಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಮಗಳ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ. ಪುತ್ರಿಗೆ ರಹಾ ಎಂದು ಹೆಸರು ಇಟ್ಟಿರುವ ಈ ದಂಪತಿ, ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಎದುರು ಮಗಳ ಜೊತೆ ಪೋಸ್ ನೀಡಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ವೈರಲ್ ಆಗಿವೆ. ಸಖತ್ ಕ್ಯೂಟ್ ಆಗಿರುವ ರಹಾ ಮುಖವನ್ನು ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.