ಹಾವೇರಿ, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿಯ ಕುರಿತು ಮಾತನಾಡುವ ಮೂಲಕ ಸಚಿವ ಜಮೀರ್ ಅಹ್ಮದ್ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಹಾವೇರಿಯಲ್ಲಿ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷಗಳ ಅಭ್ಯರ್ಥಿ ಡಿ.ಆರ್. ಪಾಟೀಲ್ ಅವರ ಪರ ಶನಿವಾರ ಪ್ರಚಾರ ನಡೆಸಿದ ಸಚಿವ ಜಮೀರ್ ಅಹ್ಮದ್, ನರೇಂದ್ರ ಮೋದಿ ಅವರ ಖಾಸಗಿ ಬದುಕಿನ ಬಗ್ಗೆ ಟೀಕಿಸುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ‘ಮುಖ ಸರಿಯಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವತು ತಮ್ಮ ಪತ್ನಿಯನ್ನು ತ್ಯಜಿಸಿದ್ದಾರೆ. ಅವರಿಗೆ ಇದ್ದಿದ್ದು ಒಬ್ಬರೇ ಹೆಂಡತಿ. ಅವರನ್ನೇ ಬಿಟ್ಟಿದ್ದಾರೆ. ಹೆಂಡತಿ ಬಿಟ್ಟವರ ಮುಖವನ್ನು ನೋಡಿ ದೇಶದ ಜನರು ಮತ ಹಾಕಬೇಕೇ?’ ಎಂದು ಜಮೀರ್ ಪ್ರಶ್ನಿಸುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ. ಮೋದಿ ಅವರ ಮುಖ ನೋಡಿ ಮತ ಹಾಕಿ ಎನ್ನುವ ಬದಲು ನಿಮ್ಮ ಸಾಧನೆ ಹೇಳಿಕೊಂಡು ಮತ ಕೇಳಿ ಎಂದು ಬಿಜೆಪಿ ಅಭ್ಯರ್ಥಿಗೆ ಸಲಹೆ ನೀಡಿದರು. ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖ ನೋಡಿ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ತಮ್ಮ ಮುಖ ತೋರಿಸಲು ಇಷ್ಟವಿಲ್ಲದೆ ಹೋದರೆ ಬುರ್ಖಾ ಹಾಕಿಕೊಂಡು ಮತ ಯಾಚಿಸಲಿ ಎಂದು ಲೇವಡಿ ಮಾಡಿದರು. ಹಾವೇರಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವರು ಮೋದಿ ಮುಖ ನೋಡಿ ನನಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಹೆಂಡತಿಯನ್ನು ತ್ಯಜಿಸಿದವರ ಮುಖ ನೋಡಿ ಜನರು ಮತ ಹಾಕಬೇಕೇ ಎಂದು ಪ್ರಶ್ನಿಸಿದರು. ಮುಂದುವರೆದು, ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮೆಲ್ಲರಲ್ಲೂ ಆಸೆಯಿದೆ. ರಾಜ್ಯದ ಜನತೆಗೂ ಅದೇ ಬಯಕೆಯಿದೆ. ಸಿದ್ದರಾಮಯ್ಯ ಅವರೇನೂ ನಾಳೆಯೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ. ಮುಂದಿನ ಚುನಾವಣೆಯಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು.