ಭುವನೇಶ್ವರ: ದುರ್ಬಲ ಚೀನದ ಮೇಲೆ ಸವಾರಿ ಮಾಡಿದ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತನ್ನ ಅಂತಿಮ ವಿಶ್ವಕಪ್ ಲೀಗ್ ಪಂದ್ಯದಲ್ಲಿ 11-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಆಡಿದ ಎಲ್ಲ 3 ಪಂದ್ಯಗಳನ್ನು ಗೆದ್ದು “ಬಿ’ ವಿಭಾಗದ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. 10ನೇ ನಿಮಿಷದಲ್ಲಿ ಬ್ಲೇಕ್ ಗೋವರ್ ಗೋಲಿಗೆ ಮುಹೂರ್ತ ವಿರಿಸಿದರು. ಬಳಿಕ 19 ಹಾಗೂ 34ನೇ ನಿಮಿಷದಲ್ಲಿ ಮತ್ತೆರಡು ಗೋಲು ಬಾರಿಸುವ ಮೂಲಕ ಬ್ಲೇಕ್ ಹ್ಯಾಟ್ರಿಕ್ ಸಾಧಿಸಿದರು. ಟಿಮ್ ಬ್ರ್ಯಾಂಡ್ 2 ಗೋಲು ಹೊಡೆದರು. ಇದು ಚೀನಕ್ಕೆ ಎದುರಾದ ಮೊದಲ ಸೋಲು. ಹಿಂದಿನೆರಡು ಪಂದ್ಯ ಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಚೀನ ಯಶಸ್ವಿಯಾಗಿತ್ತು.
“ಬಿ’ ವಿಭಾಗದ ಮತ್ತೂಂದು ಪಂದ್ಯದಲ್ಲಿ ಐರ್ಲೆಂಡ್‌ಗೆ 4-2 ಅಂತರದ ಸೋಲುಣಿಸಿದ ಇಂಗ್ಲೆಂಡ್ ದ್ವಿತೀಯ ಸ್ಥಾನಿಯಾಗಿ ಲೀಗ್ ಹೋರಾಟ ಮುಗಿಸಿದೆ (4 ಅಂಕ). ಇದು ಈ ಕೂಟದಲ್ಲಿ ಆಂಗ್ಲ ಪಡೆಗೆ ಒಲಿದ ಮೊದಲ ಗೆಲುವು. ಇಂಗ್ಲೆಂಡ್ ಇನ್ನು ಕ್ವಾರ್ಟರ್ ಫೈನಲ್‌ಗಾಗಿ “ಕ್ರಾಸ್-ಓವರ್’ ಪಂದ್ಯವಾಡಲಿದೆ.
ಆಸ್ಟ್ರೇಲಿಯ ವಿರುದ್ಧ ಬಾರೀ ಅಂತರದಿಂದ ಸೋತರೂ ತೃತೀಯ ಸ್ಥಾನ ಪಡೆದ ಚೀನಕ್ಕೂ ಕ್ರಾಸ್ ಓವರ್ ಅವಕಾಶ ಲಭಿಸಿದೆ (2 ಅಂಕ). ಒಂದು ಡ್ರಾ ಹಾಗೂ 2 ಸೋಲನುಭವಿಸಿದ ಐರ್ಲೆಂಡ್ ಕೂಟದಿಂದ ನಿರ್ಗಮಿಸಿತು.