ಬೆಂಗಳೂರು, ಏ. 23, ನ್ಯೂಸ್ ಎಕ್ಸ್ ಪ್ರೆಸ್: ನಗರದ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಕೂಡ ಈ ಸಾರಿ ಮತದಾರರ ಹೆಸರು ಡಿಲೀಟ್ ಆಗಿರುವ ಆರೋಪ ಕೇಳಿಬರುತ್ತಿದೆ. ವಿಶೇಷ ಅಂದರೆ ಎಲ್ಲಾ ಪಕ್ಷದ ಮುಖಂಡರೂ ಇದು ತಮ್ಮ ಮತದಾರರ ಅಮೂಲ್ಯ ಮತಗಳು ಎಂದು ಪ್ರತಿಪಾದಿಸುತ್ತಿರುವುದು. ಒಂದೆಡೆ ಬಿಜೆಪಿ ತನ್ನ ಮತದಾರರನ್ನು ಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದು ಹೇಳಿಕೊಂಡಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಇದೇ ಆರೋಪ ಮಾಡಿದೆ. ಕೆಲವರು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದು, ಇದುವರೆಗೂ ಈ ನಿಟ್ಟಿನಲ್ಲಿ ಆಯೋಗ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈಗಾಗಲೇ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಅವರು ತಮ್ಮ ಮತದಾರರಲ್ಲಿ ಸುಮಾರು 1500 ಮಂದಿಯ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪತ್ನಿಯ ಹೆಸರಿದ್ದರೆ, ಪತಿಯ ಹೆಸರು ಡಿಲೀಟ್ ಮಾಡಲಾಗಿದೆ. ತಂದೆಯ ಹೆಸರಿದ್ದರೆ ತಾಯಿಯ ಹೆಸರಿಲ್ಲ. ಕಳೆದ ಸಾರಿ ಮತ ಹಾಕಿದ ವ್ಯಕ್ತಿಯನ್ನು ಈ ಸಾರಿ ಕಿತ್ತು ಹಾಕಲಾಗಿದೆ. ಹತ್ತಾರು ವರ್ಷದಿಂದ ಒಂದೆ ಕಡೆ ಮತದಾನ ಮಾಡುತ್ತಿರುವವರ ಹೆಸರು ಈ ಸಾರಿ ಮಾಯವಾಗಿದೆ ಎಂದು ಆರೋಪಿಸಿ ನಾಗರಬಾವಿಯ ಕೆಎಲ್ಇ ಕಾಲೇಜಿನ ಬೂತ್ ಒಂದರಲ್ಲೇ 500 ಮಂದಿಯ ಹೆಸರು ಅಳಿಸಿಹಾಕಿರುವ ಬಗ್ಗೆ ಅವರು ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರು. ಲೋಕಸಭೆ ಕ್ಷೇತ್ರವ್ಯಾಪ್ತಿಯಲ್ಲಿ ತಲಾ 45 ರಿಂದ 50 ಸಾವಿರದವರೆಗೂ ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಒಂದು ತಿಂಗಳ ಈಚೆ ಪಟ್ಟಿಯಿಂದ ಅಳಿಸಿಹಾಕಲಾಗಿದೆ ಎಂದು ಜನರು ದೂರುತ್ತಿದ್ದಾರೆ. ಇನ್ನು ಪರಿಸ್ಥಿತಿ ಗಂಭೀರವಾದರೆ ತಾವು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಯಾವುದೇ ಅನುಮಾನಗಳು ಕಂಡುಬಂದಿಲ್ಲ ಎಂದಿದ್ದಾರೆ ಚುನಾವಣಾಧಿಕಾರಿಗಳು. ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಅವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ತರುವಾಯ ಚುನಾವಣಾ ಆಯೋಗಕ್ಕೆ ತೆರಳಿ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ತಮ್ಮ ವಿಧಾನಸಭೆ ಕ್ಷೇತ್ರ ಬಿಟಿಎಂ ಲೇಔಟ್ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಹಲವರ ಹೆಸರು ಅಳಿಸಿ ಹಾಕಲಾಗಿದೆ. ಇವರೆಲ್ಲಾ ಮತದಾನ ಮಾಡಲಾಗದೇ ಹೋಗಿದ್ದಾರೆ. ಇದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಚುನಾವಣಾ ಆಯೋಗ ಸೂಕ್ತ ರೀತಿಯ ತನಿಖೆ ನಡೆಸಬೇಕೆಂದು ಮನವಿ ಮಾಡಲು ಮುಂದಾಗಿದ್ದರು. ಆದರೆ, ಅವರ ಸಂಬಂಧಿ ಒಬ್ಬರು ಶ್ರೀಲಂಕಾದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಸುದ್ದಿ ತಿಳಿದು ಬಂದ ಹಿನ್ನೆಲೆ ಹಾಗೂ ಸಿದ್ದರಾಮಯ್ಯ ಭೇಟಿ ಕೂಡ ಸಾಧ್ಯವಾಗದ ಹಿನ್ನೆಲೆ ಇಂದು ಚುನಾವಣಾ ಆಯೋಗಕ್ಕೆ ತೆರಳಿ ದೂರು ನೀಡಲು ರಾಮಲಿಂಗರೆಡ್ಡಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಮತದಾರರ ಪಟ್ಟಿ ಸಿದ್ಧಪಡಿಸುವಾಗ ಹಲವರ ಹೆಸರು ಅಳಿಸಿ ಹೋಗಿದ್ದು, ಇದಕ್ಕೆ ಕಾರಣ ಹುಡುಕುವ ಕಾರ್ಯ ಚುನಾವಣಾ ಆಯೋಗ ಮಾಡುತ್ತಿದೆ. ಅವರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.