ಬೆಂಗಳೂರು, ಮೇ. 13, ನ್ಯೂಸ್ ಎಕ್ಸ್ ಪ್ರೆಸ್: ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯ ನಡುವೆ ವೈಯಕ್ತಿಕವಾಗಿ ವ್ಯತ್ಯಾಸಗಳು, ಭಿನ್ನಾಭಿಪ್ರಾಯ ಇರಬಹುದು. ಆದರೆ ರಾಜಕೀಯವಾಗಿ ಮೈತ್ರಿ ಸರ್ಕಾರದ ಪಕ್ಷವಾಗಿ ಒಟ್ಟಿಗೆ ಇರುವಾಗ ಸಮನ್ವಯ ಸಮಿತಿಯ ಅಧ್ಯಕ್ಷರ ಬಗ್ಗೆಯೇ ಲಘುವಾಗಿ ವಿಶ್ವನಾಥ್ ಮಾತನಾಡಿದ್ದು ಸರಿಯಿಲ್ಲ.ಇನ್ನು ಮುಂದೆ ಆ ರೀತಿ ಹೇಳಿಕೆಗಳು ಬರಬಾರದು. ಹಾಗೆಯೇ ನಮ್ಮ ಪಕ್ಷದವರಿಂದಲೂ ಈ ರೀತಿ ಹೇಳಿಕೆಗಳು ಬರಬಾರದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಆರೋಗ್ಯಕರವಾಗಿ ಮುಂದುವರಿಯಬೇಕಾದರೆ ಇಂಥ ಹೇಳಿಕೆಗಳು ಸಹಾಯ ಮಾಡುವುದಿಲ್ಲ. ಸಿಎಂ ಮತ್ತು ದೇವೇಗೌಡ ಇದನ್ನು ಗಮನಿಸಬೇಕಿದೆ. ಸರ್ಕಾರ ಇನ್ನೂ 4 ವರ್ಷ ಕೆಲಸ ಮಾಡಬೇಕು. ಮೈತ್ರಿ ಮುಂದುವರಿಯಬೇಕಾದರೆ ಇಂಥ ಹೇಳಿಕೆಗಳು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟರು.
ಆಂತರಿಕವಾಗಿ ಭಿನ್ನಾಭಿಪ್ರಾಯ ಇದ್ದರೆ ಸಂಬಂಧಪಟ್ಟ ಮುಖಂಡರ ಜೊತೆ ಚರ್ಚೆ ಮಾಡಲಿ. ಕೆಪಿಸಿಸಿ ಅಧ್ಯಕ್ಷರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಲಿ ಎಂದು ವಿಶ್ವನಾಥ್ ಬಗ್ಗೆ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.