ಯಾದಗಿರಿ, 18. ಆ : ದೈಹಿಕ ಶಿಕ್ಷಕರನ್ನು ವರ್ಗಾವಣೆ ಮಾಡಿದ ಹಿನ್ನಲೆ ವಿದ್ಯಾರ್ಥಿಗಳು ತೀವ್ರ ಬೇಸರಗೊಂಡು, ಕಣ್ಣೀರು ಹಾಕಿ, ಗೋಗರೆದು, ಸಂಘಟನಾಕಾರರ ಕಾಲಿಗೆ ಬಿದ್ದಿದ್ದಾರೆ. ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಶಿರವಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ತಮಗೆ ದೈಹಿಕ ಶಿಕ್ಷಕರು ಬೇಕು ಎಂದು ವಿವಿಧ ಸಂಘಟನಕಾರರ ಕಾಲಿಗೆ ಬಿದ್ದು ವಿದ್ಯಾರ್ಥಿಗಳು ಬೇಡಿಕೊಳ್ಳುತ್ತಿದ್ದಾರೆ. ದೈಹಿಕ ಶಿಕ್ಷಕರನ್ನು ವರ್ಗಾಯಿಸಿರುವುದನ್ನು ತಡೆಯುವಂತೆ ವಿವಿಧ ಸಂಘಟನೆಕಾರರ ಬಳಿ ಬಿಕ್ಕಿ, ಬಿಕ್ಕಿ ಅತ್ತು ಕೇಳಿಕೊಳ್ಳುತ್ತಿದ್ದಾರೆ. ತರಗತಿ ಬಹಿಷ್ಕರಿಸಿ ಶಾಲೆಯ ಬಳಿಯೂ ಪ್ರತಿಭಟನೆ ನಡೆಸುತ್ತಿದ್ದಾರೆ. ತಾವಷ್ಟೇ ಪ್ರತಿಭಟನೆ ಮಾಡಿದರೆ ಸಾಕಾಗುವುದಿಲ್ಲ ಎಂಬುದನ್ನು ಅರಿತ ವಿದ್ಯಾರ್ಥಿಗಳು, ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರನ್ನು ಭೇಟಿ ಮಾಡಿ, ಅವರ ಬಳಿ ತಮ್ಮ ಕಷ್ಟ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾತ್ರವಲ್ಲದೆ, ತರಗತಿಗೆ ತೆರಳದೆ, ಬೋರ್ಡ್ ಹಿಡಿದು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ನಮಗೆ ದೈಹಿಕ ಶಿಕ್ಷಕರು ಬೇಕು, ಹೇಗಾದರೂ ಮಾಡಿ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಮರಳಿ ಕರೆಸಿ ಎಂದು ಗೋಳಿಡುತ್ತಿದ್ದಾರೆ.