ಬೆಂಗಳೂರು: ಇತ್ತೀಚಿಗಷ್ಟೆ ಟೊಮೆಟೊ ದರ ಗಗನಕ್ಕೆ ಹೇರಿತ್ತು. ಇದರಿಂದ ಸಾಮಾನ್ಯ ಜನರು ಕಂಗಾಲಗಿದ್ದರು. ಆದರೆ ರೈತರು ಮಾತ್ರ ಹೆಚ್ಚು ಸಂತೋಷದಿಂದ ಸಂಭ್ರಮ ಪಟ್ಟರು.
ಜುಲೈ-ಆಗಸ್ಟ್ ತಿಂಗಳಲ್ಲಿ ರಾಣಿಯಂತೆ ಮೆರೆದಿದ್ದ ಕೆಂಪು ಸುಂದರಿ ಟೊಮೆಟೊ ಬೆಲೆ ಈಗ ಪಾತಾಳಕ್ಕೆ ಧುಮುಕಿದೆ. ಭಾರೀ ದರ ಏರಿಕೆಯಿಂದ ಟೊಮೆಟೊ ದೇಶದೆಲ್ಲೆಡೆ ಸುದ್ದಿ ಮಾಡಿತ್ತು. ಅದರಲ್ಲೂ ಟೊಮೆಟೊ ಬೆಳೆದ ರೈತರು ಕೋಟ್ಯಾಧಿಪತಿಗಳಾಗಿದ್ದರು. ಆದರೆ ಈಗ ಟೊಮೆಟೊ ದರ ಕಡಿಮೆಯಾಗಿದ್ದು ಸಾಮಾನ್ಯ ಅಂಗಡಿಗಳಲ್ಲಿ ಒಂದು ಟೀ-ಕಾಫಿಗೆ ಖರ್ಚಾಗುವ 10 ರೂ.ಗೆ ಒಂದು ಕೆಜಿ ಟೊಮೆಟೊ ಮಾರಾಟವಾಗುತ್ತಿದೆ. ಇದರಿಂದ ಟೊಮೆಟೊ ಬೆಳೆದ ರೈತರು ಕಂಗಾಲಾಗಿದ್ದಾರೆ.
ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಈ ಹಿಂದೆ 15 ಕೆ.ಜಿ ಬಾಕ್ಸ್ ಟೊಮೆಟೊ 2,500 ವರೆಗೂ ಮಾರಾಟವಾಗಿತ್ತು. ಬೆಲೆ ಏರಿಕೆಯಿಂದ ಗ್ರಾಹಕರು ಕಣ್ಣೀರು ಸುರಿಸಿದ್ದರು. ಆದರೆ ಈಗ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ಗ್ರಾಹಕರು ನಿಟ್ಟುಸಿರು ಬಿಟ್ಟರೆ ಟೊಮೆಟೊ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬರುತ್ತಿದೆ ಮತ್ತು ಇತರ ರಾಜ್ಯಗಳಿಂದ ಬೇಡಿಕೆ ಕುಸಿದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ತೋಟಗಾರಿಕಾ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.