ರಾಂಚಿ, ಡಿ. 23: ರಾಜ್ಯದ 24 ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದ್ದು, 81 ಕ್ಷೇತ್ರಗಳ ಚುನಾವಣಾ ಫಲಿತಾಂಶ ಬೆಳಗ್ಗೆ 11 ಅಥವಾ ಮಧ್ಯಾಹ್ನ 12 ಗಂಟೆ ಒಳಗಾಗಿ ಪ್ರಕಟವಾಗುವ ಸಾಧ್ಯತೆಯಿದೆ. ಜೆಎಂಎಂ ಹಾಗೂ ಕಾಂಗ್ರೆಸ್ ಮೈತ್ರಿಗೆ ಬಹುಮತ ದೊರೆಯುವ ಸಾಧ್ಯತೆ ಇದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಸತ್ಯವಾಗಲಿವೆಯೇ ಅಥವಾ ಸುಳ್ಳಾಗಲಿವೆಯೇ ಎಂಬುದನ್ನು ಫಲಿತಾಂಶ ತಿಳಿಸಲಿದೆ.
ಚುನಾವಣೋತ್ತರ ಸಮೀಕ್ಷೆಗಳು ಜೆಎಂಎಂ-ಕಾಂಗ್ರೆಸ್ ಮೈತ್ರಿಗೆ ಸ್ಪಷ್ಟಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಪಕ್ಕಾ ಎಂದು ಭವಿಷ್ಯ ನುಡಿದ ಹೊರತಾಗ್ಯೂ, ಜಾರ್ಖಂಡ್ನ ಜೆಎಂಎಂಗೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ತಿರುಚುವಿಕೆಯ ಭೀತಿ ಎದುರಾಗಿದೆ. ಇದೇ ಕಾರಣಕ್ಕಾಗಿ ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಅವರ ನೇತೃತ್ವದ ಪಕ್ಷದ ನಿಯೋಗ, ಮತ ಎಣಿಕೆ ಕಾರ್ಯ ಮುಗಿಯುವವರೆಗೂ ಇವಿಎಂಗಳ ಮೇಲೆ ಕಣ್ಗಾವಲು ವಹಿಸಬೇಕು ಎಂದು ಕೋರಿ ಚುನಾವಣಾಧಿಕಾರಿಗೆ ಕೋರಿದೆ.