ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ಮಹಾನಗರ ಸಾರಿಗೆ ನಿಗಮಕ್ಕೆ (ಬಿಎಂಟಿಸಿ) ಇಟಿಎಂ ಮಿಷನ್ (ಟಿಕೆಟ್ ಯಂತ್ರ) ಮಾರಾಟ ಮಾಡಿ ನಿರ್ವಹಣೆ ಮಾಡುತ್ತಿದ್ದ ‘ಟ್ರೈಮ್ಯಾಕ್ಸ್’ ಕಂಪನಿ ದಿವಾಳಿಯಾಗಿದ್ದರಿಂದ ಇಂತಹುದೇ ಯಂತ್ರ ಪೂರೈಸುವ ಕಂಪನಿ ಹುಡುಕಾಟಕ್ಕೆ ಬಿಎಂಟಿಸಿ ಮುಂದಾಗಿದ್ದರೆ, ಇತ್ತ ನಿರ್ವಾಹಕರು ಮುದ್ರಿತ ಟಿಕೆಟ್ ವಿತರಿಸುವ ಹಳೆ ಪದ್ಧತಿಗೆ ಹೊಂದಿಕೊಳ್ಳಲು ಪರದಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಎಂಟಿಸಿಯ ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್) ನಿರ್ವಹಣೆ ಮಾಡುತ್ತಿದ್ದ ‘ಟ್ರೈಮ್ಯಾಕ್ಸ್’ ಕಂಪನಿ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ನಿಗಮದ ಐಟಿಎಸ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಸುಮಾರು ಮೂರು ಸಾವಿರ ಇಟಿಎಂ ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ದುರಸ್ತಿ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಟ್ರೈಮ್ಯಾಕ್ಸ್ ಕಂಪನಿಯಿಂದ ಇಟಿಎಂ ಯಂತ್ರ ನಿರ್ವಹಣೆಯ ಉಪ ಗುತ್ತಿಗೆ ಪಡೆದಿರುವ ‘ವೆರಿಪೋನ್’ ಕಂಪನಿಯನ್ನು ನೇರವಾಗಿ ಸಂಪರ್ಕಿಸಿದ್ದು, ನಿರ್ವಹಣೆ ಮುಂದುವರಿಸುವ ಸಂಬಂಧ ಮಾತುಕತೆಯಲ್ಲಿ ತೊಡಗಿದೆ. ಇಟಿಎಂ ಯಂತ್ರಗಳು ದುರಸ್ತಿಯಾಗುವವರೆಗೂ ಪೂರ್ವ ಮುದ್ರಿತ ಟಿಕೆಟ್ ವಿತರಿಸುವಂತೆ ಸೂಚಿಸಲಾಗಿದೆ.
ಇಷ್ಟುದಿನ ಪ್ರಯಾಣಿಕರಿಗೆ ಇಟಿಎಂ ಯಂತ್ರಗಳಲ್ಲಿ ಟಿಕೆಟ್ ನೀಡುತ್ತಿದ್ದ ನಿರ್ವಾಹಕರಿಗೆ ಅನಿರೀಕ್ಷಿತ ಬೆಳವಣಿಗೆಯಿಂದ ಹಳೆಯ ವ್ಯವಸ್ಥೆ ಅಂದರೆ ಪೂರ್ವ ಮುದ್ರಿತ ಟಿಕೆಟ್ ವಿತರಿಸುವ ಅನಿರ್ವಾರ್ಯತೆ ಎದುರಾಗಿದೆ. ಏಕೆಂದರೆ, ಇಟಿಎಂ ಯಂತ್ರಗಳು ನಿರ್ವಾಹಕರ ಸ್ನೇಹಿಯಾಗಿದ್ದು, ವೇಗವಾಗಿ ಟಿಕೆಟ್ ನೀಡಲು ಸಹಕಾರಿಯಾಗಿವೆ. ಪೂರ್ವ ಮುದ್ರಿತ ಟಿಕೆಟ್ ವಿತರಣೆ ಕಷ್ಟದ ಕೆಲಸ. ಕೈ ತುಂಬ ಟಿಕೆಟ್‌ಗಳ ಕಟ್ಟು ಹಿಡಿದುಕೊಂಡು ಪ್ರಯಾಣಿಕರು ಹೇಳುವ ನಿಲ್ದಾಣಕ್ಕೆ ನಿಗದಿತ ದರದ ಟಿಕೆಟ್ ನೀಡಬೇಕು. ಈ ಪ್ರಕ್ರಿಯೆಗೆ ಬಹಳಷ್ಟುಸಮಯ ಹಿಡಿಯುತ್ತದೆ. ಬಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಇತ್ತೆಂದರೆ ಪೂರ್ವಮುದ್ರಿತ ಟಿಕೆಟ್ ನೀಡುವುದು ಸಾಹಸದ ಕೆಲಸವಾಗುತ್ತದೆ. ಚಾಲಕ ಕಂ ನಿರ್ವಾಹಕನ ಕರ್ತವ್ಯ ನಿರ್ವಹಿಸುವವರಿಗೆ ಇದು ಸವಾಲಾಗುತ್ತದೆ ಎಂದು ಕೆಂಗೇರಿಯ ಬಿಎಂಟಿಸಿ ಘಟಕ 37ರ ಚಾಲಕ ಕಂ ನಿರ್ವಾಹಕರೊಬ್ಬರು ಆತಂಕ ವ್ಯಕ್ತಪಡಿಸಿದರು. ನಿಯಮದ ಪ್ರಕಾರ ನಿಗದಿತ ಮಾರ್ಗದ ಪ್ರತಿ ಸ್ಟೇಜ್(ಹಂತ) ಮುಕ್ತಾಯದ ಬಳಿಕ ಯಾವ ದರ ಟಿಕೆಟ್‌ಗಳು ಎಷ್ಟುಮಾರಾಟವಾಗಿವೆ ಎಂಬ ಮಾಹಿತಿಯನ್ನು ಟ್ರಿಪ್ ಶೀಟ್‌ನಲ್ಲಿ ನಮೂದಿಸಬೇಕು. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದಾಗ ಟಿಕೆಟ್ ನೀಡುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಬಸ್ ಸ್ಟೇಜ್ ಹಾದುಹೋಗುವುದೇ ಗೊತ್ತಾಗುವುದಿಲ್ಲ. ಈ ನಡುವೆ ನಿಗಮದ ತನಿಖಾಧಿಕಾರಿಗಳು ಮಾರ್ಗ ಮಧ್ಯೆ ಬಸ್ ತಪಾಸಣೆ ಮಾಡಿದರೆ, ಟಿಕೆಟ್ ಜತೆಗೆ ಟ್ರಿಪ್ ಶೀಟ್ ಪರಿಶೀಲಿಸುತ್ತಾರೆ. ಒಂದು ವೇಳೆ ಟಿಕೆಟ್‌ಗಳ ಮಾಹಿತಿ ನಮೂದಿಸದಿದ್ದರೆ ದಂಡ ವಿಧಿಸಿ ವಿಚಾರಣೆಗೆ ನೋಟಿಸ್ ನೀಡುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ..