ಯಶವಂತಪುರ, ಅ. 10: ಇತ್ತೀಚಿಗೆ ಸುರಿದ ಮಳೆಯಿಂದ ದೊಡ್ಡಬಿದರಕಲ್ಲು ಗ್ರಾಮದ ಕೆರೆಯು ತುಂಬಿ ನೆನ್ನೆ ಮಧ್ಯರಾತ್ರಿ ಕೋಡಿ ಬಿದ್ದಿದೆ. ಇದರಿಂದಾಗಿ ಅಂದಾನಪ್ಪ ಲೇಔಟ್, ಭವಾನಿ ನಗರ, ಮಂಜುಳಾ ಎನ್ ಕ್ಲೆವೆ, ಜಿನ್ನಾಗರಮ್ಮ ಬಡಾವಣೆಗಳಲ್ಲಿ ನೀರು ನುಗ್ಗಿದೆ. ಕೆಲವು ತಗ್ಗು ಪ್ರದೇಶಗಳಲ್ಲಿ ಸಾವಿರಾರು ಮನೆಗಳಿಗೆ ನೀರು ನುಗ್ಗಿ ರಾತ್ರಿ ಇಡೀ ನೀರನ್ನು ಹೊರಚೆಲ್ಲುವ ಪರಿಸ್ಥಿತಿ ಎದುರಾಗಿದೆ ಕೆಲವು ರಸ್ತೆಗಳನ್ನು ಹಾಗೂ ಮೈದಾನ ಕೆರೆಗಳಂತಾಗಿವೆ.
“ಕೆಲವೊಂದು ರಾಜಕಾಲುವೆಗಳು ಒತ್ತುವರಿಯಾಗಿ, ಇರುವ ರಾಜಕಾಲುವೆಯಲ್ಲಿ ಕಸ, ಮಣ್ಣು ಗಿಡಗಂಟೆಗಳು ಬೆಳೆದು ನೀರು ವ್ಯವಸ್ಥಿತವಾಗಿ ಹರಿಯದೆ ರಸ್ತೆ, ಮೈದಾನ ಹಾಗೂ ಬಡಾವಣೆಗಳಿಗೆ ನುಗಿದೆ ´ಎಂದು ಅಂದಾನಪ್ಪ ಬಡಾವಣೆ ನಿವಾಸಿ ಕೆ. ಎನ್. ಕೆಂಪಯ್ಯ ಹೇಳಿದರು.
ಭವಾನಿನಗರ ನಿವಾಸಿ ಮಧುಸೂದನ್ ”ರಾತ್ರಿ 10ಗಂಟೆಯಿಂದ ಮಳೆ ಧಾರಾಕಾರವಾಗಿ ಸುರಿದು ಮಧ್ಯರಾತ್ರಿ ಕೆರೆ ಕೋಡಿ ಒಡೆದು ಇಲ್ಲಿಯ ಎಲ್ಲಾ ಬಡಾವಣೆಗಳಿಗೆ ನೀರು ನುಗ್ಗಿತು. ಈಗ ಇಂದು ಬೆಳಗ್ಗೆಯಿಂದ ನೀರು ಹೊರ ಹಾಕಿ ಸಾಕಾಗಿದೆ ಮನೆಗಳಲ್ಲಿ
ನ ವಸ್ತುಗಳು ಹಾಳಾಗಿವೆ ´
ಎಂದರು.
ಜಿನ್ನಾಗರಮ್ಮ ಬಡಾವಣೆ ನಿವಾಸಿ ಅನಿಲ್ ಕುಮಾರ್ ‘ಮೊದಲೇ ಇಲ್ಲಿಯ ರಸ್ತೆಗಳು ಹಾಳಾಗಿದ್ದವು. ಈಗ ಕೆರೆ ಕೋಡಿ ಒಡೆದು ಮನೆ, ರಸ್ತೆಯಲ್ಲೆಲ್ಲಾ ನೀರು ಆವರಿಸಿದೆ. ಮನೆಯಿಂದ ಹೊರಗಡೆ ಓಡಾಡುವುದಕ್ಕೂ ತೊಂದರೆಯಾಗುತ್ತಿದೆ. ಮನೆ ಸಂಪಿನಲ್ಲಿ ನೀರು ತುಂಬಿದ್ದರಿಂದ ರಾತ್ರಿಯೆಲ್ಲಾ ಅದನ್ನು ಪಂಪ್ ನಿಂದ ಹೊರಗಡೆ ಹಾಕಿದ್ದೇವು. ರಸ್ತೆಯ ನೀರಿನಲ್ಲೆಲ್ಲ ಹಾವು, ಹುಳುಗಳು ಓಡಾಡುತ್ತಿವೆ’ ಎಂದರು.