ಮಾಲೂರು: ದೇಶ ನಿರ್ಮಾಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಇತ್ತೀಚಿನ ಕೋವಿಡ್ ಸಮಯದಲ್ಲಿ ಇಡೀ ಜಗತ್ತು ಮೆಚ್ಚಿಕೊಂಡಿದೆ ಎಂದು ಶಾಸಕ ಕೆ.ವೈ ನಂಜೇಗೌಡ ತಿಳಿಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ್ ಯೋಜನೆಯಡಿ ತಾಲೂಕಿನ ೩೦೦ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿ ಮಾತನಾಡಿದರು.
ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಸಜ್ಜುಗೊಳಿಸುವ ಸಲುವಾಗಿ ಸ್ಮಾರ್ಟ್ ಫೋನ್ ವಿತರಿಸಲಾಗುತ್ತಿದ್ದು, ವಿತರಣೆಗಾಗಿ ಕೇಂದ್ರ ಸರಕಾರ ೯೦೫೬ ಕೋಟಿ ರೂ ಅನುದಾನ ವಿನಿಯೋಗಿಸುತ್ತಿದೆ. ಮೊಬೈಲ್ ಜತೆಯಲ್ಲಿ ಸಿಮ್, ಪವರ್ ಬ್ಯಾಂಕ್ ನೀಡುತ್ತಿದ್ದು, ತಿಂಗಳಿಗೆ ೩೦೦ರೂಗಳ ಟಾಕ್‌ಟೈಂ ಸಹ ನೀಡುತ್ತಿದೆ. ಉತ್ತಮ ಸೇವೆಗಾಗಿ ಸ್ಮಾರ್ಟ್ ಫೋನ್ ಸದ್ಬಳಕೆಯಾಗಬೇಕು. ಸ್ಮಾರ್ಟ್ ಫೋನ್‌ನಲ್ಲಿ ಅಳವಡಿಸಲಾದ ತಂತ್ರಾಂಶಗಳ ಮೂಲಕ ನಿಖರ ಮಾಹಿತಿ ಪ್ರತಿ ಕಾರ್ಯಕರ್ತೆಯಿಂದ ಲಭ್ಯವಾಗಲಿದೆ. ಪ್ರತಿಯೊಂದು ಕಾರ್ಯಕ್ರಮದ ಪ್ರಗತಿ ಸಾಧ್ಯವಾಗಲಿದೆ ಎಂದರು.
ತಾ.ಪಂ ಇಒ ವಿ.ಕೃಷ್ಣಪ್ಪ ಮಾತನಾಡಿ, ಶಾಲಾ ಪೂರ್ವದ ಶಿಕ್ಷಣ ಬಲಗೊಳ್ಳಬೇಕು. ಆದರೆ ಕೋವಿಡ್ ಸಮಯದಲ್ಲಿ ಸಾಮಾಜಿಕ ಅಂತರವೇ ಮುಖ್ಯ ಔಷದಿಯಾಗಿರುವುದರಿಂದ ಹಿಂದಿನಂತೆ ಒಂದೆಡೆ ಮಕ್ಕಳನ್ನು ಸೇರಿಸಿ ಶಿಕ್ಷಣ, ಪೌಷ್ಠಿಕ ಆಹಾರ ನೀಡಲಾಗುತ್ತಿಲ್ಲ, ಆದರಿಂದ ಮಕ್ಕಳ ಮತ್ತು ಗರ್ಭಿಣಿಯರ ಮನೆಗಳಿಗೆ ಪೌಷ್ಠಿಕ ಆಹಾರ ತಲುಪಿಸುವ ಕೆಲಸವಾಗಿದೆ ಎಂದರು.