ಕೆಜಿಎಫ್:ನಗರದ ಸ್ವರ್ಣಕುಪ್ಪಂನಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ, ಬೈಕ್ ಸಮೇತ ರಾಜಕಾಲುವೆಗೆ ಬಿದ್ದಿದ್ದು, ನಗರದಲ್ಲಿ ಚರ್ಚೆಗೆ ಕಾರಣವಾಗಿದೆ.
ಊರಿಗಾಂಪೇಟೆಯ ಮೂಲದ ಮಹಿಳೆ ಸ್ವರ್ಣಕುಪ್ಪಂಗೆ ಬರುತ್ತಿರುವಾಗ, ರಸ್ತೆಯ ಮಧ್ಯದಲ್ಲಿದ್ದ ಕಲ್ಲು ಚಪ್ಪಡಿ ಮೂಲಕ ಹೋಗಬೇಕಾಗಿತ್ತು. ಹೋಗಲು ಕಷ್ಟ ಎಂದು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡಿದ್ದ ತಮ್ಮ ಮೂವರು ಮಕ್ಕಳನ್ನು ಕೆಳಗೆ ಇಳಿಸಿ, ಬೈಕ್‌ನಲ್ಲಿ ಕಲ್ಲು ಚಪ್ಪಡಿ ದಾಟಲು ಹೋದ ವ್ಯಕ್ತಿ ಆಯ ತಪ್ಪಿ ರಾಜಕಾಲುವೆಗೆ ಬೈಕ್ ಸಮೇತ ಬಿದ್ದರು. ಈ ದೃಶ್ಯವು ಸಮೀಪದ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆದರೆ ಬೈಕ್‌ನಲ್ಲಿ ಹಳ್ಳಕ್ಕೆ ಬಿದ್ದದ್ದ ಮಹಿಳೆಗೆ ಕೊಂಚ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ನಗರಸಭೆಯ ಕಾರ್ಯವೈಖರಿ ಬಗ್ಗೆ ಜನರಲ್ಲಿ ಅಸಮಾಧಾನ ಉಂಟು ಮಾಡಿತ್ತು.
ಇಂದು ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ನಗರಸಭೆಯ ಎಇಇ ಶ್ರೀಧರ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಕೂಡಲೇ ಕಾಮಗಾರಿ ನಡೆಸಿ, ಒಂದು ವಾರದಲ್ಲಿ ರಸ್ತೆಯನ್ನು ಪೂರ್ಣ ಮಾಡುವುದಾಗಿ ಭರವಸೆ ನೀಡಿದರು.