ನವದೆಹಲಿ: ನಮ್ಮ ಭಾರತದಲ್ಲಿ ನಡೆದಿರುವ ಜಿ ಟ್ವೆಂಟಿ ಶೃಂಗ ಸಭೆಯಲ್ಲಿ ಹಲವಾರು ಗಣ್ಯಾತಿ ಗಣ್ಯರು ಭಾಗಿಯಾಗಿರುತ್ತಾರೆ ಜಿ ಟ್ವೆಂಟಿ ಶೃಂಗಸಭೆ ಇದು ನಮ್ಮ ಭಾರತದ ಹೆಮ್ಮೆ ಇದು ದೆಹಲಿಯ ಪ್ರಗತಿ ಮೈದಾನ ಭಾರತ್ ಮಂಟಪದಲ್ಲಿ ಜಿ20 ಶೃಂಗಸಭೆ ನಡೆಯಿತ್ತು.
ಭಾನುವಾರ ಮುಕ್ತಾಯವಾದ 2 ದಿನಗಳ ದೆಹಲಿ ಜಿ20 ಶೃಂಗಸಭೆ ಅತ್ಯಂತ ಯಶಸ್ವಿಯಾಗಿದ್ದು, ಹಲವು ಜಾಗತಿಕ ಸಮಸ್ಯೆಗಳಿಗೆ ಮಾತುಕತೆ ಮತ್ತು ಶಾಂತಿಯುತ ಮಾರ್ಗಗಳ ಮೂಲಕ ಪರಿಹಾರದ ಸಾಧ್ಯತೆಯನ್ನು ಮುಂದಿಟ್ಟಿದೆ ಎಂದು ಸದಸ್ಯ ದೇಶಗಳು ಹಾಗೂ ವಿದೇಶಿ ಮಾಧ್ಯಮಗಳು ಅತೀವ ಮೆಚ್ಚುಗೆ ವ್ಯಕ್ತಪಡಿಸಿವೆ. ಅಲ್ಲದೆ ಸಂಘರ್ಷದ ಸಮಯದಲ್ಲಿ ಶಾಂತಿಮಂತ್ರ ಪಠಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿಯ ಘೋಷಣೆಯಲ್ಲಿನ ಹಲವು ಅಂಶಗಳ ಬಗ್ಗೆ ಅಮೆರಿಕ, ರಷ್ಯಾ, ಫ್ರಾನ್ಸ್ ದೇಶಗಳ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ದಿಲ್ಲಿ ಘೋಷಣೆ ಬಗ್ಗೆ ವಿದೇಶಿ ಮಾಧ್ಯಮಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದ್ದು, ರಷ್ಯಾ ಯುದ್ಧ ಖಂಡಿಸಿದ ದಿಲ್ಲಿ ಘೋಷಣೆ ಒಂದು ರೀತಿ ಕ್ಷಿಪ್ರಕ್ರಾಂತಿ ಇದ್ದಂತಿತ್ತು ಎಂದು ಅಮೆರಿಕದ ಸಿಎನ್‌ಎನ್ ಸುದ್ದಿವಾಹಿನಿ ಬಣ್ಣಿಸಿದೆ.
ಜಾಗತಿಕ ಆರ್ಥಿಕತೆಯು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು, ದುರ್ಬಲತೆ ಮತ್ತು ಸಂಘರ್ಷಗಳಿಂದ ನಲುಗಿರುವಾಗ ಅತ್ಯಂತ ಕ್ಲಿಷ್ಟ ಸವಾಲುಗಳನ್ನು ಕೂಡಾ ಜಾಗತಿಕ ಸಮುದಾಯ ಒಂದಾಗಿ ಪರಿಹರಿಸಬಹುದು ಎಂಬುದನ್ನು ಜಿ20 ಶೃಂಗ ತೋರಿಸಿಕೊಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಭಾರತದ ಅಧ್ಯಕ್ಷತೆಯ ಜಿ20 ಶೃಂಗವು ಹಲವು ದೃಷ್ಟಿಕೋನದಲ್ಲಿ ಹಲವು ಮಹತ್ವದ ತಿರುವುಗಳಿಗೆ ಸಾಕ್ಷಿಯಾಗಿದೆ. ಶೃಂಗದ ಫಲಶೃತಿಯು ಹಲವು ಸವಾಲುಗಳ ನಡುವೆ ಮುನ್ನಡೆಯುವ ದಾರಿಯನ್ನು ತೋರಿಸಿದೆ ಮತ್ತು ಗ್ಲೋಬಲ್ ಸೌತ್‌ನ ಶಕ್ತಿ ಮತ್ತು ಮಹತ್ವವನ್ನು ತೋರಿಸಿಕೊಟ್ಟಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬದಲಾಗಿ ದೇಶವನ್ನು ಪ್ರತಿನಿಧಿಸಿದ್ದ ರಷ್ಯಾ ವಿದೇಶಾಂಗ ಸಚಿವ ಸೆರ್ಗೈ ಲಾವ್ರೋವ್ ತಿಳಿಸಿದ್ದಾರೆ.
ಜಿ20 ಸಭೆಯನ್ನು ರಾಜಕೀಯಗೊಳಿಸುವ ಯತ್ನವನ್ನು ವಿಫಲಗೊಳಿಸಿದ ಭಾರತವನ್ನು ಅಭಿನಂದಿಸುತ್ತೇನೆ ಎಂದು ಲಾವ್ರೋವ್ ತಿಳಿಸಿದ್ದಾರೆ.
ಉಕ್ರೇನ್ ಯುದ್ಧಕ್ಕೆ ಕಾರಣವಾದ ರಷ್ಯಾವನ್ನು ಏಕಾಂಗಿ ಮಾಡುವಲ್ಲಿ ದೆಹಲಿ ಘೋಷಣೆ ಯಶಸ್ವಿಯಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನ್ ಹೇಳಿದ್ದಾರೆ. ಇಡೀ ಜಿ20 ಒಕ್ಕೂಟವು ಉಕ್ರೇನ್‌ನಲ್ಲಿ ಶಾಂತಿ ಬಯಸುತ್ತದೆ. ಇದಕ್ಕಾಗಿ ವಿಶ್ವಸಂಸ್ಥೆಯ ಸನ್ನದು ಪಾಲನೆ ಮಾಡಬೇಕು ಎಂಬುದು ಜಿ20 ಆಶಯ. ಈ ವಿಷಯದಲ್ಲಿ ಶಾಂತಿಯ ಮಾತುಗಳನ್ನು ಆಡಿದ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.