ಚಿಕ್ಕನಾಯಕನಹಳ್ಳಿ: ಲಿಂಗ್ಯಕ್ಯರಾದ ಗೋಡೇಕರೆ ಸ್ಥಿರಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮದೇಶೀಕೇಂದ್ರಸ್ವಾಮಿಗಳ ಕ್ರಿಯಾಸಮಾಧಿಯು ಗೋಡೆಕೆರೆಯ ತಪೋವನದಲ್ಲಿ ಶರಣ ಸಂಪ್ರದಾಯ ವಿಧಿ ವಿದಾನದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಭಾನುವಾರ ಬೆಳಗಿನಜಾವ ಹೃದಯಾಘಾತದಿಂದ ಲಿಂಗ್ಯಕ್ಯಗೊಂಡ ತಾಲ್ಲೂಕಿನ ಗೋಡೆಕರೆಯ ಸ್ಥಿರಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮ ದೇಶೀಕೇಂದ್ರ ಸ್ವಾಮಿಗಳ ಕ್ರಿಯಾ ಸಮಾಧಿಯ ವಿದಿ ವಿದಾನಗಳು ಸೋಮವಾರ ೧೦ರಿಂದ ಆರಂಭಗೊಂಡು ೧೨-೩೦ರೊಳಗೆ ಅಪಾರ ಭಕ್ತರ ಸಮ್ಮುಖದಲ್ಲಿ ಗೋಡೆಕೆರೆಯ ತಪೋವನದಲ್ಲಿ ನೆರವೇರಿಸಲಾಯಿತು. ಇದಕ್ಕೂ ಮುನ್ನ ಶ್ರೀಗಳ ಪಾರ್ಥಿವ ಶರೀರವನ್ನು ಅಲಂಕೃತ ವಾಹನದಲ್ಲಿ ಕುಳ್ಳಿರಿಸಿ ಮಠದಿಂದ ತಪೋವನದವರೆಗೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು. ಈ ಸಂದರ್ಭದಲ್ಲಿ ನಂದಿಧ್ವಜ, ವೀರಗಾಸೆ, ನಗಾರಿ, ಮಂಗಳವಾದ್ಯ ಹಾಗೂ ಭಕ್ತರ ಭಜನೆಯ ತಂಡ ಹಾಗೂ ಸಕಲ ಬಿರುದಾವಳಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.