ದೊಡ್ಡಬಳ್ಳಾಪುರ, ಅ. 30: ಪಟಾಕಿ ಸರ ಹಚ್ಚಿ ಕಿಡಿಯಿಂದ ತಪ್ಪಿಸಿಕೊಳ್ಳಲು ರೈಲ್ವೇ ಹಳಿಗಳ ಮೇಲೆ ಓಡಿದ ವ್ಯಕ್ತಿ ರೈಲು ಢಿಕ್ಕಿ ಹೊಡೆದು ಧಾರುಣವಾಗಿ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ರೈಲ್ವೇ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಜುನಾಥ (38) ರೈಲಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿ. ಕಳೆದ 8 ವರ್ಷಗಳ ಹಿಂದೆ ಮದುವೆಯಾಗಿದ್ದ ರಾಯಚೂರು ಮೂಲದ ಮಂಜುನಾಥ ಮತ್ತು ವಿಜಯರಂಜನಿ ದಂಪತಿಗಳು ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಜಯ ನಗರ ಬಡಾವಣೆಯ ವಾಸವಾಗಿದ್ದರು. ಮಂಜುನಾಥ್ ಅವರು ಒಮ್ನಿ ಮ್ಯಾಟ್ರಿಕ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ದೀಪಾವಳಿ ಆಚರಿಸುತ್ತಿದ್ದ ದಂಪತಿಗಳು ನೆನ್ನೆ ಸಂಜೆ 6-30 ರ ಸುಮಾರಿಗೆ ಮನೆಯ ಪಕ್ಕದ ರೈಲ್ವೆ ಹಳಿಯ ಪಕ್ಕದಲ್ಲಿ ಪಟಾಕಿಗೆ ಬೆಂಕಿ ಹಚ್ಚಿ ಓಡಿ ಬರಲು ರೈಲ್ವೆ ಹಳಿದಾಟಲು ಯತ್ನಿಸಿದಾಗ ಹಿಂದಿನಿಂದ ಬಂದ ಕಾಚಿಗೂಡ ಎಕ್ಸ್‌ಪ್ರೆಸ್ ರೈಲು ಮಂಜುನಾಥ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಇನ್ನು ಮಂಜುನಾಥ್ ಪತ್ನಿ ಗರ್ಭಿಣಿ ಯಾಗಿದ್ದು, ನೂರಾರು ಕನಸು ಕಟ್ಟಿದ್ದ ಆಕೆ ಕನಸು ಭಗ್ನಗೊಂಡಿವೆ.ಆಕೆ ರೋಧನೆ ಮುಗಿಲುಮುಟ್ಟಿತ್ತು.
ರೈಲು ಹಳಿಯ ಪಕ್ಕದಲ್ಲೆ ಬಡಾವಣೆ ಇದ್ದು, ರೈಲ್ವೆ ಹಳಿ ಮತ್ತು ಬಡಾವಣೆಯ ಮದ್ಯೆ ಯಾವುದೇ ತಡೆಗೋಡೆ ಇಲ್ಲದ ಕಾರಣ ಇಲ್ಲಿ ಪದೇ ಪದೇ ಇಂತಹ ದುರ್ಘಟನೆಗಳು ನಡೆಯುತ್ತಿರುತ್ತವೆ. ಈ ರೈಲ್ವೆ ಇಲಾಖೆ ಕೂಡಲೆ ತಡೆಗೋಡೆ ನಿರ್ಮಿಸಿ ಮುಂದೆ ನಡೆಯಬಹುದಾದ ಅವಘಡಗಳನ್ನು ತಡೆಯಬೇಕು ಎಂದು ಸ್ಥಳೀಯ ನಿವಾಸಿ ಸುರೇಶ್‌ಬಾಬು ಅವರು ಆಗ್ರಹಿಸಿದ್ದಾರೆ.
ದೊಡ್ಡಬಳ್ಳಾಪುರ ರೈಲ್ವೇ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.