ಬೆಂಗಳೂರು, ಡಿ. 19: ಸೆಕ್ಷನ್ 144 ಅನ್ನು ಉಲ್ಲಂಘಿಸಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಗರದ ಟೌನ್ಹಾಲ್ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂದಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರದಾದ್ಯಂತ ಹೋರಾಟಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಗೌರಿ ಮೀಡಿಯಾ ಮತ್ತು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ನೇತೃತ್ವದ ಹೋರಾಟಗಾರರ ತಂಡ ಇಂದು ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು.
ಪ್ರತಿಭಟನೆ ಘೋಷಣೆಯಾಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇಂದು ಬೆಂಗಳೂರಿನಾದ್ಯಂತ ಸೆಕ್ಷನ್ 144 ಜಾರಿ ಮಾಡಿದ್ದರು. ಅಲ್ಲದೆ, ಯಾರೂ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಲಾಗಿತ್ತು.
ಆದರೂ, ಪೊಲೀಸರ ಎಚ್ಚರಿಕೆಯನ್ನು ಉಲ್ಲಂಘಿಸಿ ಟೌನ್ಹಾಲ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಕೊನೆಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಖ್ಯಾತ ಬರಹಗಾರ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಎಲ್ಲಾ ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾದರು.