ಕೊಲಂಬೋ, ಏ. 27, ನ್ಯೂಸ್ ಎಕ್ಸ್ ಪ್ರೆಸ್: ಏ. 21 ರಂದು ಕೊಲಂಬೋ ಬಳಿ 8 ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದಾಳಿಯಲ್ಲಿ 250 ಕ್ಕೂ ಹೆಚ್ಚು ಜನ ಮೃತರಾಗಿದ್ದರೆ, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಶ್ರೀಲಂಕಾದಲ್ಲಿ ಸರಣಿ ಬಾಂಬ್ ದಾಳಿ ನಡೆದು ಒಂದು ವಾರ ಕಳೆಯುವ ಮೊದಲೇ ಉಗ್ರರನ್ನು ಅವರ ಅಡಗುದಾಣಕ್ಕೇ ತೆರಳಿ ಶ್ರಿಲಂಕಾ ಸೇನೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಟ್ಟು 15 ಜನರು ಮೃತರಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಶ್ರೀಲಂಕಾ ಸೇನೆ ದಾಳಿ ನಡೆಸಿದ ವಿಷಯ ತಿಳಿಯುತ್ತಲೇ ಉಗ್ರರು ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶ್ರೀಲಂಕಾದ ಕಲ್ಮುನೈ ಎಂಬಲ್ಲಿ ಐಸಿಸ್ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ ಶ್ರೀಲಂಕಾ ಸೇನೆ ಒಟ್ಟು 15 ಜನರನ್ನು ಕೊಂದುಹಾಕಿದೆ. ಇದರಲ್ಲಿ 6 ಜನ ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ.
ಕಲ್ಮುನೈನ ಪ್ರದೇಶವೊಂದರಲ್ಲಿ ಉಗ್ರರು ಅಡಗಿದ್ದ ಖಚಿತ ಮಾಹಿತಿಯ ಮೇರೆಗೆ ಸೇನೆ ದಾಳಿ ನಡೆಸಿದ್ದು, ಪ್ರತಿದಾಳಿ ನಡೆಸಲು ಸಾಧ್ಯವಾಗದೆ 3 ಉಗ್ರರು ತಾವೇ ಗುಂಡುಹಾಕಿಕೊಂಡು ಸತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೃತ ಉಗ್ರರಲ್ಲಿ ಹಲವರು ಆತ್ಮಾಹುತಿ ದಾಳಿಕೋರರಿದ್ದರು ಎಂದೂ ಶ್ರೀಲಂಕಾ ಸೇನೆ ತಿಳಿಸಿದೆ. ಆದರೆ ಮೃತರೆಲ್ಲರೂ ಭಯೋತ್ಪಾದಕ ಸಂಘಟನೆಗೆ ಸೇರಿದವರೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.