ಮುಂಡರಗಿ, ಜೂ. 29 : ತಾಲೂಕಿನ ಡಂಬಳ ಗ್ರಾಮದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ,ಸೋಮನಾಥ ದೇವಾಲಯಕ್ಕೆ ಕತ್ತಲಾವರಿಸಿದ್ದು ಪ್ರವಾಸಿಗರಿಗೆ ನಿತ್ಯ ಕಿರಿಕಿರಿಯಾಗಿದೆ. ಭಾರತೀಯ ಪುರಾತತ್ವ ಇಲಾಖೆ 2 ತಿಂಗಳಿಂದ ವಿದ್ಯುತ್ ಬಿಲ್ ಕಟ್ಟದ ಕಾರಣ ಹೆಸ್ಕಾಂನವರು 15 ದಿನಗಳಿಂದ ದೇವಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಡಂಬಳ ಗ್ರಾಮವು ಕಲ್ಯಾಣ ಚಾಲುಕ್ಯರ, ಕೆಳದಿ ಅರಸರ, ರಾಷ್ಟ್ರಕೂಟರು, ಪೇಶ್ವೆಗಳು ಆಡಳಿತ ನಡೆಸಿದ ಕೇಂದ್ರವಾಗಿದೆ. ಅಂದಿನಿಂದಲೂ ಇಲ್ಲಿನ ಪುರಾತನ ಹಾಗೂ ಐತಿಹಾಸಿಕ ದೇವಾಲಯಗಳಾದ ದೊಡ್ಡಬಸವೇಶ್ವರ ಹಾಗೂ ಸೋಮನಾಥ ದೇವಾಲಯ ಪ್ರಸಿದ್ಧಿ ಪಡೆದಿವೆ. ಇಂತಹ ಐತಿಹಾಸಿಕ ದೇವಾಲಯದಲ್ಲಿ ವಿದ್ಯುತ್ ಸಂರ್ಪಕ ಕಡಿತವಾಗಿರುವುದರಿಂದ ಸಂಜೆ ಸಮಯದಲ್ಲಿ ದೇವಾಲಯ ವೀಕ್ಷಿಸಲು ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ. ಹಾಗೆಯೇ ವಿದ್ಯುತ್ ಕಡಿತದಿಂದ ಸುಂದರ ಉದ್ಯಾನಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಾಗದ ಕಾರಣ ವಿವಿಧ ಬಗೆಯ ಗಿಡ ಮರಗಳು ಸೊರಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎನ್ನುವುದು ಸ್ಥಳೀಯರು ಮತ್ತು ಪ್ರವಾಸಿಗರು ಒತ್ತಾಸೆಯಾಗಿದೆ.