ಮಾಧ್ಯಮಗಳಿಗೆ ನಿರ್ಬಂಧ: ತೇಜಸ್ವಿ ಸೂರ್ಯಗೆ ತಡೆ ನೀಡಿದ ಹೈಕೋರ್ಟ್

ಮಾಧ್ಯಮಗಳಿಗೆ ನಿರ್ಬಂಧ: ತೇಜಸ್ವಿ ಸೂರ್ಯಗೆ ತಡೆ ನೀಡಿದ ಹೈಕೋರ್ಟ್

ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ತನ್ನ ಕುರಿತು ಮಾಧ್ಯಮಗಳು ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ಅಧೀನ ನ್ಯಾಯಾಯಲಯದ ಮೂಲಕ ಮಾಧ್ಯಮಗಳಿಗೆ ಹೇರಿದ್ದ ನಿರ್ಬಂಧವನ್ನು (ಇಂಜೆಂಕ್ಷನ್) ಹೈಕೋರ್ಟ್ ಇಂದು ರದ್ದುಪಡಿಸಿದೆ.  ಮಾರ್ಚ್ 29ರಂದು ಬೆಂಗಳೂರಿನ  ಸಿವಿಲ್ ಮತ್ತು ಸೆಷನ್ ಕೋರ್ಟಿನ ಮೊರೆ ಹೋಗಿದ್ದ ತೇಜಸ್ವಿ ಸೂರ್ಯ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ನಕಾರಾತ್ಮಕವಾಗಿ ವರದಿಗಳನ್ನು ಪ್ರಕಟಿಸುವುದಕ್ಕೆ ನಿರ್ಬಂಧ ಹೇರುವಂತೆ ಕೋರಿದ್ದರು. ಈ ಕೋರಿಕೆಯನ್ನು ಪರಿಗಣಿಸಿದ್ದ ಅಧೀನ ನ್ಯಾಯಾಲಯವು ಮಾಧ್ಯಮಗಳಿಗೆ ನಿರ್ಬಂಧ ಹೇರಿತ್ತು. ಈ ನಿರ್ಬಂಧವನ್ನು ಪ್ರಶ್ನಿಸಿ ಡೆಮಕ್ರಟಿಕ್ ರಿಫಾರ್ಮ್ಸ್ ಸಂಘಟನೆಯು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟು ತೀರ್ಪು ನೀಡಿ, “ಮಾನಹಾನಿಕರವಲ್ಲದ ವರದಿ ಪ್ರಕಟಿಸಲು ಮಾಧ್ಯಮಗಳಿಗೆ ಯಾವುದೇ ನಿರ್ಬಂಧವಿಲ್ಲ. ವಾದಿ (ತೇಜಸ್ವಿ ಸೂರ್ಯ)ಗೆ ಮಾಧ್ಯಮಗಳು ಮಾಡಿದ ಯಾವುದೇ ವರದಿ ಮಾನಹಾನಿಕರ ಎಂದು ಕಂಡುಬಂದರೆ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಬಹುದು” ಎಂದು ತಿಳಿಸಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ನಿಷ್ಟಾವಂತ ಕಾರ್ಯಕರ್ತೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕಟ್ ತಪ್ಪಿಸಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡುತ್ತಿದ್ದಂತೆ ತೇಜಸ್ವಿ ಸೂರ್ಯ ಅವರೊಂದಿಗೆ ಆಪ್ತರಾಗಿದ್ದ ಸೋಮ್ ದತ್ತಾ ಎಂಬ ಮಹಿಳಾ ಉದ್ಯಮಿಯೊಬ್ಬರು ತೇಜಸ್ವಿ ಸೂರ್ಯನಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಟ್ವಿಟರ್ ಮೂಲಕ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರಲ್ಲದೇ ತೇಜಸ್ವಿ ಸೂರ್ಯ ಮಹಿಳೆಯರನ್ನು ಹೊಡೆಯುವ ವ್ಯಕ್ತಿ, ಹಿಂಸಿಸುವ ವ್ಯಕ್ತಿ, ಇವನಿಗೆ ಯಾರೂ ಬೆಂಬಲ ನೀಡಬಾರದು ಎಂದು ಟ್ವೀಟ್ ಮಾಡಿದ್ದರು. ನಂತರ ಅವರ ಪರವಾಗಿ ಬಹಳಷ್ಟು ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಅವರು ಟ್ವೀಟ್ ಗಳನ್ನು ಡಿಲೀಟ್ ಮಾಡಿ, ಇದನ್ನು ಇಲ್ಲಿಗೇ ನಿಲ್ಲಿಸಲು ಕೇಳಿಕೊಂಡಿದ್ದರು. ಈ ವಿಷಯಗಳು ಮಾಧ್ಯಮಗಳ ಮೂಲಕ ಜನತೆಗೆ ತಿಳಿಯುತ್ತಿದ್ದಂತೆ ಚುನಾವಣೆ ಮೇಲೆ ಪರಿಣಾಮ ಬೀಳುವ ಭಯದಿಂದ ತೇಜಸ್ವಿ ಸೂರ್ಯ ಅಧೀನ ನ್ಯಾಯಾಲಯ ಮೂಲಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದರು. ಇಂದು ಹೈಕೋರ್ಟ್ ನೀಡಿರುವ ತೀರ್ಪು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಮುಖಭಂಗವನ್ನುಂಟು ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos