ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನದ ತಾಲೂಕ ಮಟ್ಟದ ಪ್ರಗತಿ ಪರಿಶೀಲನೆ ಸಭೆ

ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನದ ತಾಲೂಕ ಮಟ್ಟದ ಪ್ರಗತಿ ಪರಿಶೀಲನೆ ಸಭೆ

ಶಹಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪ್ರತಿಯೊಬ್ಬರಿಗೂ ತಲುಪಿಸಿ, ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯಬಾರದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕ ಅಧ್ಯಕ್ಷ  ಕೃಷ್ಣಪ್ಪಗೌಡ ಆಲ್ದಾಳ ಅವರು ಅನುಷ್ಟಾನ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.

ತಾಲೂಕ ಪಂಚಾಯತ ಸಭಾಂಗಣದಲ್ಲಿ ನಡೆದ ತಾಲೂಕ ಮಟ್ಟದ ಪ್ರಗತಿ ಪರಿಶೀಲನ ಸಭೆಯ ಅಧ್ಕಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ  ಸಲ್ಲದು, ಸಮಾಜದಲ್ಲಿ ಇನ್ನು ಅನೇಕರಿಗೆ ಗ್ಯಾರಂಟಿ ಯೋಜನೆಗಳ ಲಾಭ ಸಿಗುತ್ತಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ  ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.

ಮೀಟರ್ ಅಳವಡಿಕೆ ಮಾಡಿದರೆ ಕರೆಂಟ್ ಬಿಲ್ ಬರುತ್ತೆ ಅನ್ನುವ ಭಯ ಗ್ರಾಮೀಣ ಜನರಲ್ಲಿದೆ, ಸರಕಾರ ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುತ್ತಿದೆ, 200 ಯುನಿಟ್ ಮೇಲೆ ಯಾರೂ ವಿದ್ಯುತ್ ಬಳಕೆ ಮಾಡಲ್ಲ, ಹೀಗಾಗಿ ಕರೆಂಟ್ ಬಿಲ್ ಬರುವುದಿಲ್ಲ ಎಂದು ಜನರಲ್ಲಿ ಜಾಗೃತಿ ಮೂಡಿಸಿ, ಪ್ರತಿ ಮನೆಗೂ ಮಿಟರ್ ಅಳವಡಿಕೆ ಮಾಡಿದರೆ, ಗೃಹಜ್ಯೋತಿ ಫಲಾನುಭವಿಗಳ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೇ ವಿದ್ಯುತ್ ಸಂರ‍್ಕವಿಲ್ಲದ ಮನೆಗಳ ಮಾಹಿತಿಯೂ ಸಿಗುತ್ತದೆ ಎಂದು ತಾಲೂಕ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ತಾಲೂಕಿನ ನಗರ ಪ್ರದೇಶದಲ್ಲಿ 18, ಗ್ರಾಮೀಣ ಪ್ರದೇಶದಲ್ಲಿ 62 ಸೇರಿ 80 ಪಡಿತರ ವಿತರಣಾ ಅಂಗಡಿಗಳಿದ್ದು, 5,856 ಅಂತ್ಯೋದಯ, 48,902 ಬಿಪಿಎಲ್ ಹಾಗೂ 4,469 ಎಪಿಎಲ್ ಸೇರಿ ಒಟ್ಟು 59,227 ಪಡಿತರ ಚೀಟಿಗಳಿಂದ 2,42,522 ಫಲಾನುಭವಿಗಳು ಸರಕಾರದ ಪಂಚ ಗ್ಯಾರಂಟಿ ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಆಹಾರ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಪ್ರತಿ ತಿಂಗಳು ಎಷ್ಟು ಕುಟುಂಬಗಳು ಪಡಿತರ ಪಡೆಯುತ್ತಿಲ್ಲ ಎಂದು ಗ್ರಾಮವಾರು ಮಾಹಿತಿ ನೀಡಿದರೆ, ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರು ಅವರ ಮನೆ ಭೇಟಿ ನೀಡಿ ಪರಿಶಿಲಿಸುತ್ತಾರೆ ಎಂದು ಆಹಾರ ಇಲಾಖೆ ಅಧಿಕಾರಿಗೆ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ರೂ.ಗಳ ಮೊತ್ತ ಡಿಬಿಟಿ ಮೂಲಕ ವರ್ಗಾವಣೆ  ಮಾಡಲಾಗುವುದು. ತಾಲೂಕಿನಲ್ಲಿ 54,180 ಜನ ಫಲಾನುಭವಿಗಳು ನೋಂದಣಿಯಾಗಿದ್ದು, 52,635 ಜನರಿಗೆ ಸಹಾಯಧನ ಜಮೆಯಾಗಿದ್ದು, ತಪ್ಪಾಗಿ ಇಕೆವೈಸಿ, ಎನ್‌ಪಿಸಿಐ ಆಗದೆ ಇರುವುದು, ಮೃತರಾದವು, ಐಟಿ, ಜಿಎಸ್‌ಟಿ, ಸಿಡಿಪಿಒ ತಿರಸ್ಕೃತ ಹಾಗೂ ಪರಿಶೀಲನ ಹಂತದಲ್ಲಿರುವ 1545 ಜನ ಫಲಾನುಭವಿಗಳಿಗೆ ವಿವಿಧ ಕಾರಣಗಳಿಂದ ಮಾಸಿಕ ಹಣ ವರ್ಗಾವಣೆ ಜುಲೈ ಮತ್ತು ಆಗಸ್ಟ್ ಎರಡು ತಿಂಗಳ ಸಹಾಯಧನ ಮಾತ್ರ ಬಾಕಿ ಉಳಿದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಅಂತಹ ಫಲಾನುಭವಿಗಳ ಪಟ್ಟಿ ಮಾಡಿ, ಸಮಸ್ಯೆ ಇತ್ಯಾರ್ಥಗೊಳಿಸಲು ತುರ್ತು ಕ್ರಮಕೈಗೊಳ್ಳಿ ಎಂದು ಇಲಾಖೆ ಅಧಿಕಾರಿಗೆ ಸೂಚಿಸಿದರು. ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಯ ಅನುಷ್ಟಾನದ ಕುರಿತು ಪ್ರಗತಿ ಪರಿಶೀಲಿಸಿದರು.

ಈ ವೇಳೆ  ತಾಲೂಕ ಪಂಚಾಯತ ಕಾರ್ಯನಿರ್ವಾಕ  ಅಧಿಕಾರಿ  ಬಸವರಾಜ ಶರಬೈ,  ವ್ಯವಸ್ಥಾಪಕರಾದ  ಅಮರೇಶ, ಗ್ಯಾರಂಟಿ ಯೋಜನೆಗಳ ತಾಲೂಕ ಸಮಿತಿ ಸದಸ್ಯರಾದ ಶರಣಗೌಡ ಅಣಬಿ, ರಮೇಶ ಗುರಿಕಾರ, ಬಸಣ್ಣಗೌಡ, ಮೌನೇಶ ಶಟ್ಟಿಕೇರಾ, ಮಲ್ಲಣ್ಣಗೌಡ ತಿಪ್ಪನಳ್ಳಿ, ಚನ್ನಬಸಪ್ಪ ಜಾಯಿ, ಬಸವರಾಜ ಕಂದಳ್ಳಿ, ರಾಯಪ್ಪ ಹೊಸಮನಿ, ತಾಯಮ್ಮ ಹಾಗೂ ಗ್ಯಾರಂಟಿ ಯೋಜನೆ ಅನುಷ್ಟಾನ ಇಲಾಖೆಗಳ ಅಧಿಕಾರಿಗಳು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos