ಬೆಂಗಳೂರು: ನಗರದ ಬಿಎಂಟಿಸಿ 4ನೇ ಡಿಪೋಗೆ ಇಂದು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ದಿಢೀರ್ ಭೇಟಿ ನೀಡಿದ್ದಾರೆ. ಅವರ ಹಾಜರಿ ಸಿಬ್ಬಂದಿಗಳು ತಬ್ಬಿಬ್ಬುಗೊಂಡರು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಅಲ್ಲದೆ ಅವರೊಂದಿಗೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.
ಡಿಪೋಗೆ ಭೇಟಿ ನೀಡುವ ಮೊದಲು ನಟ ರಜನಿಕಾಂತ್ ರವರು ತಾವು ಚಿಕ್ಕಂದಿನಿಂದ ನೋಡಿ ಆಡಿ ಬೆಳೆದ ಸೀತಾಪತಿ ಆಗ್ರಹಾರದ ಶ್ರೀ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಬೆಂಗಳೂರಿಗೆ ಭೇಟಿ ನೀಡಿರುವ ನಟ ರಜನಿಕಾಂತ್ ಅವರು ತಮ್ಮ ಆತ್ಮೀಯ ಗೆಳೆಯ ಲಾಲ್ ಬಹುದ್ದೂರ್ ಅವರೊಂದಿಗೆ ಎಂದಿನಂತೆ ಸಂತಸದಿಂದ ಬೆಂಗಳೂರು ನಗರದ ವಿವಿಧೆಡೆ ಸುತ್ತಾಡಿ ಸಂಭ್ರಮಿಸಿದ್ದಾರೆ.
ಬೆಂಗಳೂರಿನ ಜಯನಗರದ ಟಿ ಬ್ಲಾಕ್ನಲ್ಲಿರುವಂತ 26ನೇ ಮುಖ್ಯರಸ್ತೆಯ ಬಿಎಂಟಿಸಿ ಡಿಪೋ-4ರಲ್ಲಿ ಎಂದಿನಂತೆ ಇಂದು ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿಗೆ ಸಾಮಾನ್ಯರಂತೆ ಬಂದಂತಹ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಡಿಪೋ ಒಳಗೆ ಬರಬಹುದಾ ಎಂಬುದಾಗಿ ಅಲ್ಲಿನ ಸಿಬ್ಬಂದಿಗೆ ಕೇಳಿದ್ದಾರೆ. ಈ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ನೋಡಿ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕ್ಷಣ ಕಾಲ ಇದು ನಿಜವೋ, ಕನಸೋ ಒಂದೂ ಗೊತ್ತಾಗದಂತೆ ಆಶ್ಚರ್ಯ ಚಕಿತರಾಗಿದ್ದರು.
ಅಲ್ಲದೇ ಡಿಪೋ-4ರಲ್ಲಿ ಒಂದು ಸುತ್ತು ಹಾಕಿದಂತ ಅವರು, ಅಲ್ಲಿನ ಸಿಬ್ಬಂದಿಯೊಂದಿಗೆ ಪೋಟೋ ಕೂಡ ತೆಗೆಸಿಕೊಂಡಿದ್ದಾರೆ. ಚಿತ್ರರಂಗ ಪ್ರವೇಶಿಸುವ ಮುನ್ನ ಸಾರಿಗೆ ಸಂಸ್ಥೆಯ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಜನಿಕಾಂತ್ ಸೀತಾಪತಿ ಅಗ್ರಹಾರದಲ್ಲಿ ರಾಯರ ದರ್ಶನ ಬಳಿಕ ಬಿಎಂಟಿಸಿ ಬಸ್ ಡಿಪೋಗೆ ಭೇಟಿ ನೀಡಿ ನೌಕರರೊಡನೆ ಸಂಭ್ರಮಿಸಿದ್ದಾರೆ.