ಧಾರವಾಡ, ಫೆ. 17: ಕಠಿಣ ಪರಿಶ್ರಮ, ಶ್ರದ್ಧೆ, ಸೌಜನ್ಯದಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಾಗ ನಂಬಿಕೆಗೆ ಒಂದು ಮಹತ್ವ ಬರುತ್ತದೆ. ಇದರಿಂದ ಬದುಕು ಶ್ರೇಷ್ಠ ದರ್ಜೆಗೆ ಏರಿದಂತಾಗುತ್ತದೆ ಎಂದು ಜೆಎಸ್‌ಎಸ್‌ನ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.
ಇಲ್ಲಿನ ವಿದ್ಯಾಗಿರಿಯ ಜೆಎಸ್‌ಎಸ್‌ನ ಶ್ರೀಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಕೇಂದ್ರ ಆಯೋಜಿಸಿದ್ದ ಐಟಿಐ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕೈಗಾರಿಕೆಗಳಿಗೆ ಐಟಿಐ ತರಬೇತಿ ಬೆನ್ನೆಲುಬು ಇದ್ದಂತೆ. ಅದರ ಸರಿಯಾದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಶಿಸ್ತಿನಿಂದ ವರ್ತಿಸಿ ತಮಗೆ ಅನುಕೂಲವಾಗುವ ಹಾಗೂ ಆಸಕ್ತಿ ಇರುವ ಕಂಪನಿ ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ ಮಾತನಾಡಿ, ಐಟಿಐ ವಿದ್ಯಾಭ್ಯಾಸ ಅನಿವಾರ್ಯವಲ್ಲ. ಪಿಯುಸಿ, ಬಿಎ, ಬಿಕಾಂ ವ್ಯಾಸಾಂಗಗಳಂತೆ ಈ ವ್ಯಾಸಾಂಗವೂ ಮುಖ್ಯವಾಗಿದೆ. ಈ ತರಬೇತಿಯನ್ನು ಶ್ರದ್ಧೆಯಿಂದ ಗ್ರಹಿಸಿಕೊಂಡು ಕಾರ್ಯೋನ್ಮುಖರಾದಲ್ಲಿ ಬದುಕು ಬಂಗಾರವಾಗುತ್ತದೆ. ನೌಕರಿ ಕೇವಲ ನಮ್ಮ ಆರ್ಥಿಕತೆಗೆ ಒತ್ತು ನೀಡುವುದಲ್ಲದೆ, ದೇಶದ ಆರ್ಥಿಕ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಮಹಾವೀರ ಉಪಾಧ್ಯೆ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯೋಗ ಮೇಳದಲ್ಲಿ 1600 ಕ್ಕೂ ಹೆಚ್ಚು ಹುದ್ದೆಗಳಿಗೆ ಸಂದರ್ಶನ ನಡೆಸಲಿವೆ ಎಂದರು. ಮೇಳದಲ್ಲಿ 22 ಕಂಪನಿಗಳು ಭಾಗವಹಿಸಿದ್ದು, 760 ವಿದ್ಯಾರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. 123 ವಿದ್ಯಾರ್ಥಿಗಳು ಸ್ಥಳದಲ್ಲೇ ಆಯ್ಕೆಯಾದರೆ, 218 ವಿದ್ಯಾರ್ಥಿಗಳು ಕೊನೇ ಸುತ್ತಿಗೆ ಆಯ್ಕೆಯಾದರು. ಡಾ. ವಿ.ಬಿ. ಬೂದನೂರ ನಿರೂಪಿಸಿದರು. ಮಹೇಶ ಕುಂದರಪಿಮಠ ವಂದಿಸಿದರು