ಮಂಡ್ಯ: ಈ ಬಾರಿ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ರಾಜ್ಯದಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ನಿನ್ನೆ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ರ್ಯಾಲಿ ಮಾಡುವುದರ ಜೊತೆಗೆ ನಾಮಪತ್ರ ಸಲ್ಲಿಕೆಯನ್ನು ಮಾಡಿದರು.
ನೆತ್ತಿಮೇಲೆ ಬೆಂಕಿಯುಗುಳುವ ಸೂರ್ಯ, ಹೆಂಚಿನಂತೆ ಕಾದ ಭೂಮಿ ಮತ್ತು ನೂಕುನುಗ್ಗಲು. ಜನ ಬಾಯಾರಿ ನೀರಿಗಾಗಿ ಹಪಹಪಿಸುವಂತಾಗಲು ಇನ್ನೇನು ಬೇಕು? ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಟಾರ್ ಚಂದ್ರು ರ್ಯಾಲಿಯಲ್ಲಿ ಭಾಗವಹಿಸಿದ್ದ ಜನಕ್ಕೆ ಅದೇ ಆಗಿದ್ದು.
ಆದರೆ ಅವರ ಅದೃಷ್ಟಕ್ಕೆ ಸ್ಟಾರ್ ಚಂದ್ರು ತಮ್ಮ ಬೆಂಬಲಿಗರಿಗೆ ಬಿಸಿಲ ಝಳದಿಂದ ಕೊಂಚ ನಿರಾಳತೆ ಒದಗಿಸಲು ಕಲ್ಲಂಗಡಿ ಹಣ್ಣುಗಳ ವ್ಯವಸ್ಥೆ ಮಾಡಿದ್ದರು ಅನಿಸುತ್ತೆ. ಜನ ತಾ ಮುಂದು ನಾ ಮುಂದು ಅಂತ ಮುಗಬಿದ್ದು ಕಲ್ಲಂಗಡಿ ತೆಗೆದುಕೊಳ್ಳತೊಡಗಿದರು. ನೋಡುನೋಡುತ್ತಿದ್ದಂತೆ ಕಲ್ಲಂಗಡಿ ಹಣ್ಣಿನ ರಾಶಿ ಬಿಸಿಲಲ್ಲಿಟ್ಟ ಮಂಜಿನ ಹಾಗೆ ಕರಗಿಹೋಯಿತು.
ಕೆಲವರು ಹಣ್ಣನ್ನು ಮನೆಗೆ ಹೊತ್ತುಕೊಂಡು ಹೋದರೆ ಬೇರೆ ಕೆಲವರು ದಾಹ ತಣಿಸಲು ಅಲ್ಲೇ ಅದನ್ನು ಒಡೆದು ತಿಂದರು. ಮತ್ತೊಂದೆಡೆ ತಮ್ಮ ಅಭಿಮಾನಿಗಳಿಗೆ ಸ್ಟಾರ್ ಚಂದ್ರು ನೀರಿನ ಬಾಟಲಿಗಳ ವ್ಯವಸ್ಥೆ ಕೂಡ ಮಾಡಿದ್ದರು.