ಬೆಂಗಳೂರು, ಜು. 29 : ಸಾಲು ಸಾಲು ಶಾಸಕರನ್ನು ಅನರ್ಹಗೊಳಿಸಿದ ಮರುದಿನವೇ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಕಳೆದ ೧೪ ತಿಂಗಳ ಕಾಲಾವಧಿಯಲ್ಲಿ ಎಲ್ಲರ ನಂಬಿಕೆಗೆ ಅರ್ಹವಾಗಿ ನಾನು ಕೆಲಸ ಮಾಡಿದ್ದೇನೆ ಎಂಬ ನಂಬಿಕೆ ನನಗಿದೆ. ಈ ಅವಧಿಯಲ್ಲಿ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇತ್ತು. ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕಾನೂನಿನ ಮಾರ್ಗದಲ್ಲಿ ಓರ್ವ ಸ್ಪೀಕರ್ ಮಾಡಬಹುದಾದ ಕೆಲಸವನ್ನಷ್ಟೆ ನಾನು ಮಾಡಿದ್ದೇನೆ. ೧೭ ಜನರನ್ನು ಅನರ್ಹಗೊಳಿಸುವ ತೀರ್ಪು ಕಾನೂನಿನ ಅಡಿಯಲ್ಲೇ ನೀಡಿದ್ದೇನೆ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಕಳೆದ ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದ ರಮೇಶ್ ಕುಮಾರ್ ರೆಬೆಲ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್. ಶಂಕರ್ ಅವರನ್ನು ಅನರ್ಹಗೊಳಿಸಿದ್ದರು. ಭಾನುವಾರ ಮತ್ತೆ ದಿಢೀರ್ ಪತ್ರಿಕಾಗೋಷ್ಠಿ ಕರೆದ ಅವರು ಉಳಿದ ೧೪ ಶಾಸಕರನ್ನೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಿದ್ದರು. ಈ ವಿಧಾನ ಸಭೆ ಅವಧಿಯಲ್ಲಿ ಮತ್ತೆ ಎಲ್ಲೂ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ನೀಡಿದ್ದರು.
ಪಕ್ಷಾಂತರ ಪಿಡುಗು : ಪಕ್ಷಾಂತರ ಒಂದು ರಾಜಕೀಯ ಪಿಡುಗು. ಇದನ್ನು ಹೋಗಲಾಡಿಸದ ಹೊರತಾಗಿ ಪ್ರಜಾಪ್ರಭುತ್ವದ ಆಶಯಗಳು ಈಡೇರುವುದು ಸಾಧ್ಯವಿಲ್ಲ. ಆದರೆ, ೧೦ನೇ ಶೆಡ್ಯೂಲ್ ಪ್ರಕಾರ ಇಂತಹ ಪಕ್ಷಾಂತರಿಗಳಿಗೆ ಕಠಿಣವಾದ ಶಿಕ್ಷೆ ನೀಡುವುದು ಸಾಧ್ಯವಿಲ್ಲ. ಹೀಗಾಗಿ ಈ ಕಾಯ್ದೆ ತಿದ್ದುಪಡಿಯಾಗಬೇಕಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರದ ಗಮನ ಸೆಳೆಯಬೇಕಿದೆ ಎಂದು ಹೇಳಿದರು.