ಬೆಂಗಳೂರು, ಮೇ. 20, ನ್ಯೂಸ್ ಎಕ್ಸ್ ಪ್ರೆಸ್: ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಕೇರಳಕ್ಕೆ ಜೂನ್ 6ರಂದು ಮುಂಗಾರು ಪ್ರವೇಶಿಸಲಿದ್ದು ಕರ್ನಾಟಕಕ್ಕೆ ಜೂ. 8-9ಕ್ಕೆ ಮುಂಗಾರು ಆಗಮನವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು.
ಮುಂಗಾರು ಆರಂಭಕ್ಕೂ ಮುನ್ನವೇ ಪೂರ್ವ ಮುಂಗಾರು ಮಳೆ ಅಲ್ಲಲ್ಲಿ ಸುರಿಯುತ್ತಿದೆ. ಕೇವಲ ಮಳೆಯಷ್ಟೇ ಅಲ್ಲದೆ ಆಲಿಕಲ್ಲು ಮಳೆ ಅನಾಹುತವನ್ನೇ ಸೃಷ್ಟಿ ಮಾಡುತ್ತಿದೆ. ಕಳೆದ 3- 4 ದಿನಗಳಿಂದ ಗಾಳಿ ಒತ್ತಡ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಭಾನುವಾರ ಗುಡುಗು ಸಹಿತ ಮಳೆಯಾಗಿತ್ತು. ಕೆಲವು ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ದೊರೆತಿದೆ.