ತಿರುವಂತಪುರ, ಏ. 3, ನ್ಯೂಸ್ ಎಕ್ಸ್ ಪ್ರೆಸ್: ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಕೇರಳದಲ್ಲಿ ಚುನಾವಣಾ ಕಣ ರಂಗೇರಿದೆ. ಈಗ ವಯನಾಡಿನಲ್ಲಿ ರಾಹುಲ್ ವಿರುದ್ಧ ಸ್ಪರ್ಧಿಸಲು ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣದ ಅರೋಪಿ ಸರಿತಾ ನಾಯರ್ ಸಜ್ಜಾಗಿದ್ದಾರೆ. ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ ಕೇರಳದ ಕಾಂಗ್ರೆಸ್ ನಾಯಕರಿಂದ ನನಗೆ ಅನ್ಯಾಯವಾಗಿದೆ. ಈ ಬಗ್ಗೆ ಅನೇಕ ಸಲ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದೆ. ಆದರೆ, ಪ್ರಧಾನಿಯಾಗುವ ಕನಸು ಹೊತ್ತಿರುವ ವ್ಯಕ್ತಿಗೆ ನನ್ನಂತ ಮಹಿಳೆಯ ಆರ್ತನಾದ ಕೇಳಿಸಲೆ ಇಲ್ಲ. ಇದಕ್ಕಾಗಿ ನಾನು ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿಯುತ್ತಿದ್ದೇನೆ ಎಂದು ಸರಿತಾ ನಾಯರ್ ಹೇಳಿದ್ದಾರೆ. ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಅವರು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರು ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದರು. ಇದೇ ಪ್ರಕರಣದ ಮುಂದುವರೆದ ಭಾಗವಾಗಿ, ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಅವರನ್ನು ಸಿಎಂ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ಎಸ್. ನಾಯರ್ ಅವರಿಗೆ 3 ವರ್ಷ ಶಿಕ್ಷೆಯಾಗಿದೆ.