ಬೆಂಗಳೂರು, ಏ. 2, ನ್ಯೂಸ್ ಎಕ್ಸ್ ಪ್ರೆಸ್: ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನವನ್ನು ನೀಡುವ ಮೂಲಕ ಭಿನ್ನಮತ ಶಮನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್ ಅವರು ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಲು ನನಗೆ ಬಹಳ ಸಂತೋಷವಾಗುತ್ತದೆ. ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದು, ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯಗೆ ದಕ್ಕಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತೇಜಸ್ವಿನಿ ಅನಂತ್ ಕುಮಾರ್, ನಮ್ಮ ಪಕ್ಷದ ಸಿದ್ಧಾಂತದ ಮೇಲೆ ನಾವು ನಿಂತಿದ್ದೇವೆ. ದೇಶ ಮೊದಲು, ಪಕ್ಷ ನಂತರ ಹಾಗೂ ನಮ್ಮ ಸ್ವಂತ ಹಿತಾಶಕ್ತಿಗಳು ಕೊನೆಯಲ್ಲಿ ಎಂದು ನಾನು ಮೊದಲಿನಿಂದಲೂ ನಮ್ಮ ಕಾರ್ಯಕರ್ತರ ಬಳಿ ಹೇಳಿಕೊಂಡು ಬಂದಿದ್ದೇನೆ. ನಾವು ಮದುವೆಯಾದಗಿನಿಂದ ಪಕ್ಷ ಕಟ್ಟುವ ಕೆಲಸದಲ್ಲಿ ನಿರತಗಳಾಗಿದ್ದೇನೆ. ಒಂದೊಂದು ಸಲ ನಮಗೆ ಅಸಮಾಧಾನ ಆಗಿರುತ್ತದೆ. ಆದರೆ ಈಗ ನಮ್ಮ ಪ್ರಬುದ್ಧತೆಯನ್ನು ತೋರಿಸುವ ಸಮಯ ಬಂದಿದೆ. ನಾವು ಅಂದುಕೊಂಡಿದ್ದು ಆಗಿಲ್ಲ ಎಂದಾಗ ಸಹಜವಾಗಿ ಎಲ್ಲರಲ್ಲೂ ಯಾಕೆ ಆಗಿಲ್ಲ ಎಂಬ ಪ್ರಶ್ನೆ ಬರುತ್ತದೆ. ಆದರೆ ಅದಕ್ಕಿಂತ ಪಕ್ಷದ ಮುಖಂಡರ ತೀರ್ಮಾನವೇ ದೊಡ್ಡದಾಗಿದೆ. ಹೀಗಾಗಿ ಮೊದಲು ದೇಶ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇವೆ. ನಮ್ಮ ಕಾರ್ಯಕರ್ತರು ಕೂಡ ಈ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದು ಹೇಳಿದ್ದರು. ಮತ್ತೊಮ್ಮೆ ಪ್ರಧಾನಿಯಾಗಿ ಮೋದಿ ಆಯ್ಕೆಯಾಗಬೇಕು. ಹೀಗಾಗಿ ಬೇರೆ ಬೇರೆ ಯೋಚನೆಗಳನ್ನು ಬಿಟ್ಟು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ. ಯಾರ ವಿರುದ್ಧವೂ ಘೋಷಣೆ ಕೂಗುವುದು ಬೇಡ. ಅಳುವುದಾಗಲಿ, ಬೇಸರವಾಗಲಿ ಅದನ್ನು ಸಾರ್ವಜನಿಕವಾಗಿ ತೋರಿಸುವುದು ನಮ್ಮ ಪಕ್ಷದ ಪದ್ಧತಿಯಲ್ಲ. ನಮ್ಮ ಪಕ್ಷದ ನಾಯಕರು, ಮುಖಂಡರು ಇದೇ ಸಿದ್ಧಾಂತವನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದಿದ್ದರು.