ಬೆಂಗಳೂರು, ಜೂ. 19: ಮಾಜಿ ಸಿಎಂ ಸಿದ್ದರಾಮಯ್ಯ ನವರು ಕಳೆದ 2 ದಿನಗಳಿಂದ ದೆಹಲಿಯಲ್ಲೇ ಇದ್ದುಕೊಂಡು ಕಾರ್ಯತಂತ್ರ ರೂಪಿಸಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ರೋಷನ್ ಬೇಗ್ ಅವರನ್ನು ಸಸ್ಪೆಂಡ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಭೇಟಿಗೆ ಬಂದಿದ್ದ ಸಿದ್ದರಾಮಯ್ಯ ಭೇಟಿ ಸಾಧ್ಯವಾಗದ ಕಾರಣ ದೆಹಲಿಯಲ್ಲಿ ಉಳಿದುಕೊಂಡು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎ.ಕೆ. ಆಂಟನಿ ಅವರನ್ನು ಭೇಟಿ ಮಾಡಿ, ರಾಜ್ಯದ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ರಾಜ್ಯ ನಾಯಕರು ಮತ್ತು ಉಸ್ತುವಾರಿಯ ವಿರುದ್ಧ ರೋಷನ್ ಬೇಗ್ ಮಾತನಾಡಿರುವ ಬಗ್ಗೆ ಎ.ಕೆ. ಆಂಟನಿ ಗಮನಕ್ಕೆ ತಂದ ಸಿದ್ದರಾಮಯ್ಯ, ಅವರನ್ನು ಸಸ್ಪೆಂಡ್ ಮಾಡುವಂತೆ ಮನವಿ ಮಾಡಿದ್ದಾರೆ. ಬಳಿಕ ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ರೋಷನ್ ಬೇಗ್ ಅವರನ್ನು ಅಮಾನತು ಮಾಡಿದೆ ಎಂದು ಹೇಳಲಾಗಿದೆ.
ಪಕ್ಷದ ವರಿಷ್ಠರನ್ನು ಟೀಕಿಸಿದ ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ರೋಷನ್ ಬೇಗ್ ಅವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಐಎಂಎ ಸಂಸ್ಥೆ ಹಗರಣದಲ್ಲಿ ರೋಷನ್ ಬೇಗ್ ಅವರ ಹೆಸರು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.. ಪಕ್ಷದಲ್ಲಿ ಅಶಿಸ್ತು ಸಹಿಸಲು ಸಾಧ್ಯವಿಲ್ಲ ಎಂದು ಸಿದ್ಧರಾಮಯ್ಯ ಹೇಳಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.