ಗಣರಾಜ್ಯೋತ್ಸವ ಶುಭ ಕೋರಿದ  ಸಿಎಂ ಸಿದ್ದರಾಮಯ್ಯ!

ಗಣರಾಜ್ಯೋತ್ಸವ ಶುಭ ಕೋರಿದ  ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನ ತಿಳಿಸಿದ ಸಿಎಂ ಸಿದ್ದರಾಮಯ್ಯ.

ಭಾರತವು ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 2024ರ ಜನವರಿ 26ಕ್ಕೆ 75 ವರ್ಷಗಳು ತುಂಬುತ್ತಿವೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ.

ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪುಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಸಂವಿಧಾನ ಎನ್ನುವುದು ಪ್ರಜಾಪ್ರಭುತ್ವದ ಆತ್ಮ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ. ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಇದನ್ನು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಈ ಖಂಡನೆಗೆ ನಾನೂ ದನಿಗೂಡಿಸುತ್ತೇನೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಗೌರವ ಮತ್ತು ಅದರ ಆಶಯಗಳ ಬಗ್ಗೆ ಬದ್ಧತೆ ಇರಲೇಬೇಕು. ಸಂವಿಧಾನೇತರ ಶಕ್ತಿಗಳಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗ ಇಲ್ಲ. ಸಂವಿಧಾನದ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಂಡು ಸಂಸದೀಯ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು. ಇದು ಸಂವಿಧಾನಕ್ಕೆ ಮಾಡುವ ಅಪಚಾರ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಕೂಡಾ ಹೌದು. ಇಂತಹವರನ್ನು ತಿರಸ್ಕರಿಸುವುದು ಪ್ರತಿಯೊಬ್ಬ ಪ್ರಜೆಯ ಧರ್ಮವಾಗಿದೆ.

ಜಾತ್ಯತೀತತೆ ಸಂವಿಧಾನದ ಮುಖ್ಯ ಆಶಯಗಳಲ್ಲಿ ಒಂದು. ಇದು ಅನ್ಯಧರ್ಮವನ್ನು ದ್ವೇಷಿಸದೆ ಸ್ವಂತ ಧರ್ಮವನ್ನು ಪ್ರೀತಿಸುವ ಉದಾತ್ತ ಮಾನವೀಯ ಗುಣ. ಜಾತಿ,ಧರ್ಮವನ್ನು ಮೀರಿ `ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಕವಿವಾಣಿ ಕೂಡಾ ಸಂವಿಧಾನದ ಈ ಆಶಯವನ್ನೇ ನೆನಪು ಮಾಡಿಕೊಡುತ್ತದೆ.

ಬಡತನ ಎನ್ನುವುದು ಅಪರಾಧ ಅಲ್ಲ. ಇದು ಸಂಪತ್ತು ಮತ್ತು ಅವಕಾಶಗಳ ಅಸಮಾನ ಹಂಚಿಕೆಯ ಫಲ ಎನ್ನುವುದನ್ನು ನಾವು ಮರೆಯಬಾರದು. ನಮ್ಮ ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯಾದಾಗ ಮಾತ್ರ ಸಮೃದ್ಧ, ಬಲಿಷ್ಠ ಮತ್ತು ಕ್ರಿಯಾಶಾಲಿಯಾದ ಸಮಾಜ ನಿರ್ಮಾಣ ಸಾಧ್ಯ ಎನ್ನುವದನ್ನು ನಾನು ಬಲವಾಗಿ ನಂಬಿದ್ದೇನೆ.

ಈ ನಂಬಿಕೆಯ ಆಧಾರದಲ್ಲಿಯೇ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯಡಿ ರೂಪುಗೊಂಡದ್ದು ನಮ್ಮ ಪಂಚ ಗ್ಯಾರಂಟಿ ಯೋಜನೆಗಳು. ಇಂದು ಇಡೀ ದೇಶ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಿವೆ. ಹಲವಾರು ರಾಜ್ಯಗಳು ಇದನ್ನು ಅನುಷ್ಠಾನಕ್ಕೆ ತರುತ್ತಿವೆ.

ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂಬ ತತ್ವವನ್ನು ಮರೆಯದಿರೋಣ. ಈ ಮೂಲಕ ಭಾರತದ ಗಣರಾಜ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿಸೋಣ ಎಂದು ಆಶಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಮತ್ತೊಮ್ಮೆ ನಿಮಗೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

 

ಫ್ರೆಶ್ ನ್ಯೂಸ್

Latest Posts

Featured Videos