ಶಿವಮೊಗ್ಗ, ಏ. 16, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. 2ನೇ ಹಂತದ ಮತದಾನಕ್ಕೆ ಇನ್ನೊಂದು ವಾರ ಬಾಕಿ ಇರುವಾಗಲೇ ಶಿವಮೊಗ್ಗದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರರ ನಡುವೇ ನೇರ ಹಣಾಹಣಿ ಏರ್ಪಟ್ಟಿದೆ. ಅಲ್ಲದೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ಈ ಮಧ್ಯೆ ಮೈತ್ರಿ ಸರ್ಕಾರದ ಡಿ.ಕೆ ಶಿವಕುಮಾರ್ ಕೂಡ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಮುಂದಾಗಿದ್ದು, ಇವರಿಗೆ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಕೈಜೋಡಿಸಿದ್ದಾರೆ.
ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರ ಮಾಡಲು ನಾಳೆಯಿಂದ ಶಿವಮೊಗ್ಗದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬೀಡುಬಿಡಲಿದ್ದಾರೆ. ಜತೆಗೆ 2ನೇ ಹಂತದಲ್ಲಿ ಮತದಾನ ನಡೆಯುವ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಇಂದಿನವರೆಗೂ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಎಂ, ನಾಳೆ ಶಿವಮೊಗ್ಗದಲ್ಲಿ ಮತಬೇಟೆ ಮಾಡಲಿದ್ದಾರೆ.