ಬೆಂಗಳೂರು, ಡಿ. 18: ಕನ್ನಡ ಚಿತ್ರದಲ್ಲಿ ನಿರ್ದೇಶನ, ನಟನೆ ಹಾಗೂ ನಿರ್ಮಾಣದಲ್ಲಿ ಹೆಸರು ಮಾಡಿ ‘ಕಲಾ ಸಮ್ರಾಟ್’ ಎಂದೇ ಗುರುತಿಸಿಕೊಂಡಿರುವ ಎಸ್.ನಾರಾಯಣ್, ಕಿರುತೆರೆಯ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ.
‘ಪಾರು’ ಧಾರಾವಾಹಿಯಲ್ಲಿ ಹೊಸ ಕಥೆ ಎಳೆಯೊಂದು ಶುರುವಾಗಿದ್ದು, ವಿಭಿನ್ನ ಪಾತ್ರವೊಂದಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಧಾರಾವಾಹಿಯಲ್ಲಿನ ಅರಸನಕೋಟೆ ಅಖಿಲಾಂಡೇಶ್ವರಿಯ ದಿಟ್ಟ ಮಾತುಗಳು, ಮುದ್ದಾದ ಹುಡುಗಿ ಪಾರುವಿನ ಮುಗ್ಧತೆ, ಆದಿತ್ಯನ ಶಿಸ್ತು, ಪ್ರೀತಮ್ ಮಾಡುವ ತರಲೆ ವೀಕ್ಷಕರ ಗಮನ ಸೆಳೆಯುತ್ತಿವೆ.
ಧಾರಾವಾಹಿಯ ಕಥಾಹಂದರ ಪ್ರತಿ ಎಪಿಸೋಡಿನಲ್ಲೂ ವೀಕ್ಷಕರು ಕಾತುರದಿಂದ ಕಾಯುವಂತೆ ಮಾಡುತ್ತಿದೆ. ಅಖಿಲಾಂಡೇಶ್ವರಿ ಪಾತ್ರ ನಿರ್ವಹಿಸುತ್ತಿರುವ ವಿನಯಾ ಪ್ರಸಾದ್ ಅವರಾದಿಯಾಗಿ ಉಳಿದ ಬಹಳಷ್ಟು ಪಾತ್ರಗಳಲ್ಲಿ ತಾರಾ ವರ್ಚಸ್ಸಿನ ನಟ–ನಟಿಯರೇ ಕಾಣಿಸಿಕೊಂಡಿದ್ದು, ವಿಶಿಷ್ಟ ಪಾತ್ರವೊಂದರ ಮೂಲಕ ಎಸ್. ನಾರಾಯಣ್ ಕಿರುತೆರೆಗೆ ಪ್ರವೇಶಿಸಿರುವುದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.